ಬೆಂಗಳೂರು, ಜು ೭: ರೈತರಿಗೆ ಮಾರಕವಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸದೃಢ ಮಾರುಕಟ್ಟೆಯನ್ನು ದುರ್ಬಲಗೊಳಿಸಲಾಗಿತ್ತು. ಇದರಿಂದಾಗಿ ಎಪಿಎಂಸಿಗಳನ್ನೇ ಅವಲಂಬಿಸಿರುವ ಲಕ್ಷಾಂತರ ರೈತರ ಬದುಕಿನ ಅನಿಶ್ಚಿತತೆಗೆ ಕಾರಣವಾಗಿತ್ತು ಎಂದು ಬಜೆಟ್ ಭಾಷಣದಲ್ಲಿ ಅವರು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಬದಲು ೨೦೧೮-೧೯ ರಲ್ಲಿ ರಾಜ್ಯದ ೧೬೭ ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ ೫೭೦ ರಿಂದ ೬೦೦ ಕೋಟಿ ರೂ.ಗಳಷ್ಟಿತ್ತು. ೨೦೨೨-೨೩ ರಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯ ನಂತರ ಈ ಆದಾಯ ೧೯೩ ಕೋಟಿ ರೂ.ಗಳಿಗೆ ಕುಸಿದಿದೆ ಎಂದು ಅಂಕಿ ಅಂಶ ನೀಡಿದರು.
ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿದ, ಶೋಷಣೆಗೆ ಒಳಪಡಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಈ ಅವ್ಯವಸ್ಥೆಗಳಿಂದ ರೈತರನ್ನು ಪಾರು ಮಾಡಿ ಅವರ ಹಿತರಕ್ಷಣೆಗಾಗಿ ರೈತ ವಿರೋಧಿ ಕಾಯ್ದೆಯನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ ಎಂದು ಹೇಳಿದರು.
ಕಾಯಕನಿಧಿ ಯೋಜನೆಯಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೆಲಸ ಮಾಡುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಅವರ ಶವ ಸಂಸ್ಕಾರಕ್ಕೆ ನೀಡುತ್ತಿದ್ದ ಮೊತ್ತವನ್ನು ೧೦ ಸಾರಿವದಿಂದ ೨೫ ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.