ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಕೊರಳಿಗೆ ಉರುಳು: ಮು.ಹಾಲಪ್ಪ

ಗುಬ್ಬಿ, ಜು. ೨೭- ಬಂಡವಾಳ ಶಾಹಿಗಳ ಪರ ನಿಂತ ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಜಾರಿಗೆ ತರುತ್ತಲೇ ಈಗ ಸಾಮಾನ್ಯ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ತಿನ್ನುವ ಆಹಾರಕ್ಕೂ ಜಿಎಸ್‌ಟಿ ತೆರಿಗೆ ಅಳವಡಿಸಿ ರೈತ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಮುರುಳಿಧರ್ ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಕಚೇರಿ ಮುಂದೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೇವಲ ಸಿರಿವಂತರ ಪರ ನಿಂತು ಉದ್ದಿಮೆ ರೀತಿ ಎಲ್ಲವನ್ನೂ ನೋಡುತ್ತಿದೆ. ಸೇವೆ ಎಂಬುದು ಮರೆತು ಸಾಮಾನ್ಯರ ತಿನ್ನುವ ಅನ್ನಕ್ಕೂ ತೆರಿಗೆ ತರುತ್ತಿದೆ ಎಂದು ವ್ಯಂಗ್ಯವಾಡಿದರು.
ರೈತರ ನಿರಂತರ ಹೋರಾಟಕ್ಕೆ ಬೆಲೆ ಕೊಡದ ಮೋದಿ ಸರ್ಕಾರ ವಿದೇಶಗಳ ಪ್ರವಾಸಕ್ಕೆ ಮಾತ್ರ ಬೆಲೆ ಕೊಟ್ಟಿದೆ. ಬೃಹತ್ ಕೈಗಾರಿಕಾ ಚಿಂತನೆ ಮಾಡುತ್ತಾ ಬಡ ಮಧ್ಯಮ ವರ್ಗವನ್ನು ಮರೆತು ಕೇವಲ ಧನವಂತರ ಪರ ನಿಂತಿದ್ದಾರೆ. ತಮಗೆ ಅನುಕೂಲದಂತೆ ಕಾಯಿದೆ ಬದಲಿಸಿ ಪ್ರಜಾ ಪ್ರಭುತ್ವಕ್ಕೆ ಧಕ್ಕೆ ತಂದಿದೆ. ಅಡುಗೆ ಅನಿಲ ಮೊದಲು ಮಹಿಳೆಯರ ಹೆಸರಿನಲ್ಲಿ ಉಚಿತ ಎಂದು ಹೇಳಿ ಈಗ ೧೨೦೦ ರೂ. ಮುಟ್ಟಿದೆ. ಪೆಟ್ರೋಲ್ ಡೀಸೆಲ್ ಬೆಲೆ ಕೇಳುವಂತಿಲ್ಲ. ಹೀಗೆ ಎಪಿಎಂಸಿ ಕಾಯ್ದೆ ತಿದ್ದಿ ರೈತರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ರೈತರ ಕೃಷಿಗೆ ಚ್ಯುತಿ ತಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೃಷಿ ತೊರೆದು ನಿರುದ್ಯೋಗಕ್ಕೆ ನಾಂದಿ ಹಾಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದು ಭರವಸೆ ನೀಡಿದ್ದ ಮೋದಿ ಅವರ ಪ್ರಕಾರ ಎಂಟು ವರ್ಷಕ್ಕೆ ಹದಿನಾರು ಕೋಟಿ ಉದ್ಯೋಗ ಯುವಕರಿಗೆ ಸಿಗಬೇಕಿತ್ತು. ಆದರೆ ಪಕೋಡ ಮಾರಿಸಿ ಯುವಕರನ್ನು ಕಡೆಗಣಿಸಿ ಕುಡಿಯುವ ಮಜ್ಜಿಗೆಗೆ ಜಿಎಸ್ಟಿ ತೆರಿಗೆ ವಿಧಿಸುವುದು ತೀರಾ ಅತಿ ವರ್ತನೆಯಾಗಿದೆ ಎಂದು ಕಿಡಿಕಾರಿದರು.
ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ನರಸಿಂಹಯ್ಯ ಮಾತನಾಡಿ, ರೈತರ ಬಗ್ಗೆ ಆಸಕ್ತಿ ಇಲ್ಲದ ಬಿಜೆಪಿ ಸರ್ಕಾರ ಈ ಹಿಂದೆ ಕಾಂಗ್ರೆಸ್ ನೀಡಿದ ಕೊಡುಗೆಗೆ ಬ್ರೇಕ್ ಹಾಕಿದೆ. ರೈತರಿಗೆ ಯಾವುದೇ ಆಸೆ ತೋರಿಸದೆ ಸೂಕ್ತ ಮಾರುಕಟ್ಟೆ, ನೀರಾವರಿ, ವಿದ್ಯುತ್ ನೀಡಿದರೆ ಸ್ವಾಭಿಮಾನದ ಬದುಕು ಕಾಣುತ್ತಾರೆ. ಅವರಿಗೂ ಸಲ್ಲದ ಜಿಎಸ್ಟಿ ತೆರಿಗೆ ಅಳವಡಿಸುತ್ತಿರುವುದು ಸೋಜಿಗದ ಸಂಗತಿ ಎಂದು ಹೀಯಾಳಿಸಿದರು.
ನಂತರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾ ಧರಣಿಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹೆಚ್.ಸಿ. ಹನುಮಂತಯ್ಯ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಹೊನ್ನಗಿರಿಗೌಡ, ಜಿ.ಎಸ್. ಪ್ರಸನ್ನಕುಮಾರ್, ರೇವಣಸಿದ್ದಯ್ಯ, ಕೆ.ಆರ್. ತಾತಯ್ಯ, ಸಲಿಂಪಾಶ, ಜಿ.ವಿ.ಮಂಜುನಾಥ್, ಜಿ.ಎಂ. ಶಿವಾನಂದ್, ಜಿ.ಎಲ್. ರಂಗನಾಥ್, ವಸಂತಮ್ಮ, ಲಾವಣ್ಯ ಮತ್ತಿತರರು ಭಾಗವಹಿಸಿದ್ದರು.