ಎಪಿಎಂಸಿ ಗೆ ಮತದಾನ

ಕಂಪ್ಲಿ, ನ.5: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ 8 ಸ್ಥಾನಗಳಿಗೆ ಬುಧವಾರ ಜರುಗಿದ ಚುನಾವಣೆಯಲ್ಲಿ ಶೇ.71.01ರಷ್ಟು ಮತದಾನವಾಗಿದೆ.
ಸಂಘದ ಆಡಳಿತ ಮಂಡಳಿಯ ಒಟ್ಟು 8 ಸ್ಥಾನಗಳಿಗೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮಾನ್ಯ ವರ್ಗದ 2 ಸ್ಥಾನಗಳಿಗೆ 9 ಅಭ್ಯರ್ಥಿಗಳು, ಪ.ಪಂ., ಪ.ಜಾ, ಹಿಂದುಳಿದ ವರ್ಗ ಬಿ ವಿಭಾಗದ ಮೀಸಲಾತಿಯಡಿಯಲ್ಲಿ ತಲಾ ಒಂದೊಂದು ಸ್ಥಾನಕ್ಕೂ ಇಬ್ಬರು, ಹಿಂದುಳಿದ ವರ್ಗ ಅ ಮೀಸಲಿನಲ್ಲಿ ಮೂವರು ಹಾಗೂ ಮಹಿಳಾ ಮೀಸಲಾತಿಯ ಎರಡು ಸ್ಥಾನಗಳಿಗೆ 5 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 1670 ಮತಗಳ ಪೈಕಿ 1356 ಪುರುಷ ಮತದಾರರು ಮತ್ತು 314 ಮಹಿಳಾ ಮತದಾರರು ಸೇರಿ ಒಟ್ಟು 1186 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶೇ.71.01ರಷ್ಟು ಮತದಾನ ನಡೆದಿದೆ. ಚುನಾವಣಾ ಕಣದಲ್ಲಿ ಅಂತಿಮವಾಗಿ ಪ.ಪಂ. ಮೀಸಲಿನಲ್ಲಿ ಆಂಜಿನೇಯಲು 543 ಮತಗಳನ್ನು, ಸಾಮಾನ್ಯ ಮೀಸಲಿನಲ್ಲಿ ಮಾಳಾಪುರ ದೇವೇಂದ್ರ ಗೌಡ 674 ಹಾಗೂ ಪ್ರಸಾದ್ ರಾವ್.ವಿ 531, ಹಿ.ವರ್ಗ ಅ ವರ್ಗದಡಿ ಮಂಜುನಾಥ ಗುಬಾಜಿ 588, ಹಿಂ.ವರ್ಗ ಬಿ ವರ್ಗದಡಿ ವಿರೂಪಾಕ್ಷಪ್ಪ ಕೆ 581, ಪ.ಜಾ ಮೀಸಲಿನಲ್ಲಿ ಶರಭಣ್ಣ ವಿ ಅವರಿಗೆ 482, ಮಹಿಳಾ ಮೀಸಲಿನಡಿ ಸ್ಪರ್ಧಿಸಿದ್ದ ಸಾವಿತ್ರಿ ಟಿ.ಎಂ 612, ಸೂರಶೆಟ್ಟಿ ಜಯಲಕ್ಷ್ಮೀ 580 ಮತಗಳನ್ನು ಗಳಿಸಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಕೃಷ್ಣನಾಯ್ಕ್ ಘೋಷಿಸಿದರು.
ಬಳಿಕ ವಿಜೇತ ಅಭ್ಯರ್ಥಿಗಳನ್ನು ಬೆಂಬಲಿಗರು ಹೂವಿನ ಹಾರ ಹಾಕಿ ಸನ್ಮಾನಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಬುಧವಾರ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಶಾಂತಿಯುತ ಮತದಾನ ನಡೆಯಿತು.