ಎಪಿಎಂಸಿ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲಃ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ವಿಜಯಪುರ, ಎ.2- ಎಪಿಎಂಸಿ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲೆ ಮಾರಬೇಕು ಎಂಬ ನಿಯಮವಿಲ್ಲ ಅವರಿಗೆ ಎಲ್ಲಿ ಅನುಕೂಲ ಹಾಗೂ ಲಾಭವಾಗತ್ತದೋ ಅಲ್ಲಿ ವ್ಯವಹರಿಸಬುಹುದಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವು ಮುಖಂಡರು ಎಪಿಎಂಸಿ ಕಾಯ್ದೆಯಿಂದ ಕಾಸಗಿಯವರಿಗೆ ಅನುಕೂಲವಾಗಲಿದೆ. ಎಪಿಎಂಸಿಗಳು ಮುಚ್ಚಿಹೋಗುತ್ತವೆ. ಇದರಿಂದ ರೈತರು ಬೆಳೆದಂತ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರೆಯುವುದಿಲ್ಲ ಎಂದು ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ರೈತರಿಗೆ ಸರಿಯಾದ ಮಾಹಿತಿ ನೀಡಿ ಕಾಯ್ದೆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂದರು. ಎಪಿಎಂಸಿ ಕಾಯ್ದೆಯಲ್ಲಿ ರೈತರ ಮಾರಟಕ್ಕೆ ಮುಕ್ತ ವಾತಾವರಣ ನಿರ್ಮಾಣ ಮಾಡಲಾಗಿದೆ. ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆ, ಹೊಲ, ಎಪಿಎಂಸಿ ಎಲ್ಲಿ ಬೇಕಾದರೂ ಮಾರಬಹುದು. ರೈತರಿಗೆ ಯಾವುದೇ ನಿರ್ಭಂಧಗಳು ಇರುವುದಿಲ್ಲ ಎಂದರು.
ಮೋದಿ ಸರ್ಕಾರದಲ್ಲಿ ಕಳೆದ 6 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ರೈತರ ಆಧಾಯವನ್ನು ದ್ವಿಗುಣ ಮಾಡಲು ಮೋದಿ ಸರ್ಕಾರ ಪಣ ತೊಟ್ಟಿದ್ದು, ಪ್ರಸಕ್ತ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 1.63 ಸಾವಿರ ಕೋಟಿ ಹಾಗೂ ರಾಜ್ಯ ಬಜೆಟ್‍ನಲ್ಲಿ 32 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದ್ದು, ರೈತರಿಗೆ ಡ್ರಿಪ್ ವ್ಯವಸ್ಥೆ, ಬೋರವೆಲ್‍ಗಳಿಗೆ ಸೋಲಾರ ಪ್ಯಾನಲ್ ಅಳವಡಿಕೆ, ರೈತರಿಗೆ ವಿದ್ಯುತ್ ಸೇರಿದಂತೆ ರೈತರಿಗೆ ವಿವಿಧ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ವಿದ್ಯುತ್ ಕಂಪನಿಗಳಿಗೆ 9000 ಸಾವಿರ ಕೋಟಿ ರೂಃ ಪ್ರಸ್ತುತ ಪ್ರತಿ ದಿನ 7 ಗಂಟೆ ತ್ರಿಪೇಸ್ ವಿದ್ಯುತ್ ನೀಡಲಾಗುತ್ತಿದ್ದು, ರೈತರಿಗೆ 10 ಎಚ್‍ಪಿ ಮೋಟರ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ವಾರ್ಷಿಕ 9000 ಸಾವಿರ ಕೋಟಿ ರೂ. ರೈತರ ವಿದ್ಯುತ್ ಬಿಲ್ಲನ್ನು ಸರ್ಕಾರ ಕಂಪನಿಗಳಿಗೆ ಕಟ್ಟುತ್ತಿದೆ. ರಾಜ್ಯದಲ್ಲಿ ವಿವಿಧ ಮೂಲಗಳಿಂದ 30000 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. 2400 ಮೆ.ವ್ಯಾ. ಸಾಮಥ್ರ್ಯದ ಕೂಡಗಿ ಥರ್ಮಲ್ ಜಿಲ್ಲೆಯಲ್ಲೇ ಇದ್ದರೂ ನಾವು ಆ ವಿದ್ಯುತ್ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಕಾರಣ ಆ ವಿದ್ಯುತ್ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯದ ಸ್ಟೇಷನ್ ನಮ್ಮ ಬಳಿ ಇರಲಿಲ್ಲ. ಈಗ ಹೆಚ್ಚಿನ ಸಾಮಥ್ರ್ಯದ ಸ್ಟೇಷನ್ಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಶೀಘ್ರದಲ್ಲೇ ರೈತರಿಗೆ 24*7 ತ್ರಿಪೇಸ್ ವಿದ್ಯುತ್‍ಃ ಸಧ್ಯ ಒಟ್ಟು 1600 ಕೋಟಿ ವೆಚ್ಚದಲ್ಲಿ ಸರ್ಕಾರ ಹಡಗಲಿಯಲ್ಲಿ 400 ಮೇ.ವ್ಯಾ. ಹಾಗೂ ಲೋಕಾಪುರದಲ್ಲಿ 400 ಮೇ.ವ್ಯಾ. ಸಾಮಥ್ರ್ಯದ ಎರಡು ಸ್ಟೇಷನ್‍ಗಳನ್ನು ಸ್ಥಾಪಿಸುತ್ತಿದೆ. ಇದರಿಂದ ನಾವು ರೈತರಿಗೆ ಅತೀ ಶಿಘ್ರದಲ್ಲೇ 24 ಗಂಟೆ ತ್ರಿಪೇಸ್ ನೀಡಲಾಗುವುದು. ಇದರಿಂದ ರೈತರು ತರಮಗೆ ಬೇಕಾದ ಬೆಳೆಗಳನ್ನು ಬೆಳೆಯಲು ಹಾಗೂ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗಲಿದೆ. ನಮ್ಮ ಸರ್ಕಾರ ರೈತಪರವಾದ ಸರ್ಕಾರವಾಗಿದೆ. ಬಿಜೆಪಿ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಡಾ. ನವೀನ್‍ಕುಮಾರ ಜೀ ಮಾತನಾಡಿ, ಉತ್ತರ ಕರ್ನಾಟಕವು ಸ್ವಭಾವ, ನಡತೆ, ಇಲ್ಲಿನ ಆಹಾರ, ಫಲವತ್ತಾದ ಭೂಮಿ ಎಲ್ಲವೂ ಸಮೃದ್ಧವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಶೇ.44 ಸಿರಿದಾನ್ಯ, ಶೇ.12 ರಷ್ಟು ಎಣ್ಣೆ ಉತ್ಪನ್ನ ಸೆರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ದೇಶದಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಾಗಿದ್ದಾರೆ. ಆದರೆ ನಾವು ಇಷ್ಟು ದಿನ ರೈತರನ್ನು ಮಾರುಕಟ್ಟೆಗೆ ಪರಿಗಣಿಸಲಿಲ್ಲ. ನಾವು ವೇಗವಾಗಿ ಯಾಂತ್ರಿಕರಣ ಮಾಡಿ, ಕೃಷಿಯನ್ನು ಮಾರುಕಟ್ಟೆ ವ್ಯವಸ್ಥೆ ಅಡಿಯಲ್ಲಿ ಬಳಸಬೇಕಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗಬೇಕಾದರೆ ನಾವು ರೈತರನ್ನು ಜಾಗೃತಗೋಳಿಸಬೇಕಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೆಂದ್ರ ಮೋದಿಯವರು ಎಫ್‍ಪಿಓ ಗಳನ್ನು ಸ್ಥಾಪಿಸುವುದರ ಮೂಲಕ ರೈತರ ಆದಾಯವನ್ನು ದ್ವಿಗುಣ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ರೈತ ಮೋರ್ಚಾದ ಪ್ರತಿಯೋಬ್ಬ ಕಾರ್ಯಕರ್ತರು ಎಫ್‍ಪಿಓಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಹಾಗೂ ದೇಶದಲ್ಲಿ ಇರುವ 5000 ಸಾವಿರ ರೈತ ಉತ್ಪಾದಕ ಕೇಂದ್ರಗಳನ್ನು 10000 ಸಾವಿರಕ್ಕೆ ಹೆಚ್ಚಿಸಬೇಕು ಎಂದರು. ಅದರಂತೆ ಜಿಲ್ಲೆಯಲ್ಲಿ ಈಗಾಗಲೇ 27 ಎಫ್‍ಪಿಓಗಳು ಕಾರ್ಯ ನಿರ್ವಹಿಸಿದರೆ, ಸಿಂದಗಿ ತಾಲೂಕು ಒಂದರಲ್ಲೇ 8 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತ ಮೋರ್ಚಾ ಕಾರ್ಯಕರ್ತರು ರೈತರಿಗೆ ಸರ್ಕಾರದ ಕೃಷಿ, ಹಾಗೂ ಎಪಿಎಂಸಿ ಕಾಯ್ದೆಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಮಾಜಿ ಸಚಿವರಾದ ಅಪ್ಪಸಾಹೇಬ ಪಟ್ಟಣಶೇಟ್ಟಿ ಹಾಗೂ ಎಸ್.ಕೆ.ಬೆಳ್ಳುಬ್ಬಿ, ಬೀಜ ಮತ್ತು ಸಾವಯುವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್, ಗುರುಲಿಂಗಪ್ಪಗೌಡ, ಆರ್.ಟಿ.ಪಾಟೀಲ್, ಕಾಸುಗೌಡ ಬಿರಾದಾರ, ಅಶೋಕ ಅಲ್ಲಾಪೂರ, ಸಂಗಮೇಶ ಬಬಲೇಶ್ವರ, ರವಿಕಾಂತ ಬಗಲಿ,ಮಲ್ಲಿಕಾರ್ಜನ ಜೋಗುರ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಚಂದ್ರಶೇಖರ ಕೌಟಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.