ಎಪಿಎಂಸಿ ಆವರಣದಲ್ಲಿ 172 ಲಕ್ಷ ರೂ. ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ


ಜಗಳೂರು.ನ.೨೨; ತಾಲ್ಲೂಕಿನ ಅಸಗೋಡು ಗ್ರಾಮದಲ್ಲಿ ೪೧ ಲಕ್ಷಕ್ಕೂ ಹೆಚ್ಚಿನ ಅನುದಾನದಲ್ಲಿ ೫೦೦ ಎಂ.ಟಿ.ಗೋದಾಮು, ೮೪ ಲಕ್ಷ ವೆಚ್ಚದಲ್ಲಿ ಅಣಬೂರು, ಸೊಕ್ಕೆಯಲ್ಲಿ ಮುಚ್ಚು ಹರಾಜು ಕಟ್ಟೆ ನಿರ್ಮಾಣ, ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ ೪೭ ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ, ರಸ್ತೆ , ಸುತ್ತು ಗೋಡೆ ನಿರ್ಮಾಣ ಮಾಡಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶದ ಗುಜರಾತ್, ದೆಹಲಿ ಹಾಗೂ ಕೇರಳ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಪರಿಪಾಲನೆ ಮಾಡುವ ಮೂಲಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ. ಎಪಿಎಂಸಿ ಸೇರಿದಂತೆ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅನುಕೂಲವಾಗಲಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಸಾಯಿಲ್ ಹೆಲ್ತ್ ಕಾರ್ಡ್, ಫಸಲ್ ಭೀಮಾ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಎಸ್.ವಿ.ರಾಮಚಂದ್ರ ಮಾತನಾಡಿ, ಬರುವ ಜೂನ್ ವೇಳೆಗೆ ೫೭ ಕೆರೆಗಳಿಗೆ ಶೇ.೭೦ ರಷ್ಟು ನೀರನ್ನು ತುಂಬಿಸುವ ಗುರಿ ಹೊಂದಲಾಗಿದೆ. ಇದರಿಂದಾಗಿ ಅಂತರ್ಜಲ ಹೆಚ್ಚಳವಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಸಂಸದರ ಕಾಳಜಿಯಿಂದಾಗಿ ಪಟ್ಟಣ ಹಾಗೂ ತಾಲ್ಲೂಕು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಉಳಿದ ಎರಡೂವರೆ ವರ್ಷಗಳ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ತರುವ ಮೂಲಕ ಅಭಿವೃದ್ಧಿಪಡಿಸಲಾಗುವುದು. ಬಯಲು ರಂಗಮಂದಿರ, ಮುಖ್ಯ ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಕೆರೆಯ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದು ಸೇರಿದಂತೆ ಪಟ್ಟಣದ ಕೊಳಚೆ ನೀರನ್ನು ಬೇರೆಡೆಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಣಬೂರು ಗುಡ್ಡದ ನೀರು ಪೋಲಾಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ೧ ಕೋಟಿ ಅನುದಾನದಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲಿದ್ದು, ಈ ಭಾಗದ ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಸ್ಟೂರು ಮಠದ ಹುಚ್ಚನಾಗಲಿಂಗೇಶ್ವರ ಸ್ವಾಮಿ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಎನ್.ಎಸ್.ರಾಜು, ಯು.ಜಿ.ಶಿವಕುಮಾರ್, ಉಮಾದೇವಿ, ಸದಸ್ಯರಾದ ಎಸ್.ಕೆ.ರಾಮರೆಡ್ಡಿ, ನಿರ್ಮಲಾ, ಶೈಲಾಚಾರಿ, ಆರ್.ವಿ.ಗೋವಿಂದರಾಜ್, ಎಸ್.ಜೆ.ಮಲ್ಲಿಕಾರ್ಜುನ ಸ್ವಾಮಿ, ಜಿ.ಹೆಚ್.ರಘುರಾಂ, ಎಂ.ಎಸ್.ಪಾಟೀಲ್, ಬಿ.ಆರ್.ಸುಧಾಮಣ , ಪಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ಸಿದ್ದೇಶ್, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಬಿಸ್ತುವಳ್ಳಿ ಬಾಬು, ಇಂದ್ರೇಶ್, ಬಾಲಕೃಷ್ಣ, ತುಪ್ಪದಹಳ್ಳಿ ಪೂಜಾರ್ ಸಿದ್ದೇಶ್, ಎಪಿಎಂಸಿ ಕಾರ್ಯದರ್ಶಿ ಯೋಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.