ಎಪಿಎಂಸಿಯಲ್ಲಿ ಮಾವಿನ ಘಮಲು

ಕೋಲಾರ,ಮೇ,೧೬:ಮಾವಿನ ನಗರಿ ಎಂದೇ ಪ್ರಸಿದ್ದವಾಗಿರುವ ಶ್ರೀನಿವಾಸಪುರದ ಎಪಿಎಂಸಿ ಆವರಣದಲ್ಲಿ ಈ ವರ್ಷದ ಮಾವಿನ ಸುಗ್ಗಿಗೆ ಮಾರುಕಟ್ಟೆ ಸಜ್ಜಾಗಿದ್ದು ಮಂಡಿಗಳು ಒಂದೊಂದಾಗಿ ಪ್ರಾರಂಭಗೊಳ್ಳುತ್ತಿವೆ. ಈಗಾಗಲೆ ಒಂದು ವಾರದ ಮುಂಚಿತವಾಗಿ ಪ್ರಾರಂಭಗೊಳ್ಳಬೇಕಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿ ಪ್ರಾರಂಭಗೊಳ್ಳುತ್ತಿದೆ, ಈಗಾಗಲೆ ಸೋಮವಾರದಿಂದ ಒಂದು ಮಂಡಿ ಪ್ರಾರಂಭಕ್ಕೆ ಚಾಲನೆ ನೀಡಿದೆ.
ಎಪಿಎಂಸಿ ಪ್ರಾಂಗಣದಲ್ಲಿ ೧೧೦ ಮಂಡಿಗಳು ಇದ್ದು ಉಳಿದಂತೆ ಎಪಿಟಂಸಿ ಆವರಣದ ಪಕ್ಕದಲ್ಲಿ ಸುಮಾರು ೨೫ ರಷ್ಟು ಖಾಸಗಿ ಮಂಡಿಗಳು ಸೇರಿ ೧೩೦ಕ್ಕು ಹೆಚ್ಚು ಮಂಡಿಗಳು ಮಾವಿನ ಸುಗ್ಗಿಯಲ್ಲಿ ಶ್ರೀನಿವಾಸಪುರದಲ್ಲಿ ಮಾವಿನ ವಹಿವಾಟು ಪ್ರಾರಂಭ ಮಾಡುತ್ತವೆ, ಇದರ ಜೊತೆಗೆ ತಾಲ್ಲೂಕಿನ ಅಲ್ಲಲ್ಲಿ ಅಂದರೆ ಪುಂಗನೂರು ಕ್ರಾಸ್, ವಳಗೇನಹಳ್ಳಿ ಕ್ರಾಸ್ ಮತ್ತು ದಳಸನೂರು ಗೇಟ್ ಸೇರಿದಂತೆ ಪಟ್ಟಣದ ಹೊರವಲಯದಲ್ಲಿ ಅಲ್ಲಲ್ಲಿ ಮಂಡಿಗಳು ಪ್ರಾರಂಭ ಗೊಂಡು ವಹಿವಾಟು ಮಾಡುತ್ತವೆ.
ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ನಡೆಸುವ ಮಂಡಿಗಳಿಗೆ ಎಪಿಎಂಸಿ ಆಡಳಿತ ಮಂಡಳಿಯಿಂದ ಶೌಚಾಲಯ, ನೀರು ಸೇರಿದಂತೆ ಇನ್ನಿತರೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಹೊರವಲಯದಲ್ಲಿ ಹಾಗು ಎಪಿಎಂಸಿ ಮಾರುಕಟ್ಟೆ ಸಮೀಪ ಖಾಸಗಿಯಾಗಿ ತಲೆಯೆತ್ತಿರುವ ಮಂಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಳ್ಳುವಂತೆ ಮಂಡಿ ಮಾಲೀಕರಿಗೆ ನೀಡಿರುವ ಪರವಾನಗಿಯಲ್ಲಿ ಸೂಚಿಸಲಾಗಿದೆ.
ಖಾಸಗಿಯಾಗಿ ನಿರ್ಮಿಸಿರುವ ಮಿಲನ್‌ಸಾರ್ ಮಂಡಿ, ಮತ್ತು ರಾಜಧಾನಿ ಮಂಡಿಗಳಲ್ಲಿ ರೈತರಿಗೆ ಮತ್ತು ಕಾರ್ಮಿಕರಿಗೆ ಹಾಗು ಮಾವು ಖರೀದಿಗಾರರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಉಳಿದಂತೆ ಅಲ್ಲಲ್ಲಿ ತಲೆಯೆತ್ತಿರುವ ಖಾಸಗಿ ಮಂಡಿಗಳಲ್ಲಿ ಯಾವುದೇ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ, ಕೆಲವರು ತಾತ್ಕಾಲಿಕವಾಗಿ ಸುಗ್ಗಿಗೆ ಮಾತ್ರ ಮೂರು ತಿಂಗಳ ಕಾಲ ಶೆಡ್ ನಿರ್ಮಾಣ ಮಾಡಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ವಹಿವಾಟನ್ನು ನಡೆಸುತ್ತಾರೆ.
ಈಗಾಗಲೆ ಮಾವಿನ ಸುಗ್ಗಿ ತಾಲ್ಲೂಕಿನಲ್ಲಿ ಪ್ರಾರಂಭಗೊಳ್ಳಬೇಕಾಗಿತ್ತು, ಚುನಾವಣೆಯಿಂದ ಹಿನ್ನಡೆಯಾಗಿದ್ದರೂ ಈ ಬಾರಿ ಫಸಲು ಕಡಿಮೆಯಿರುವುದರಿಂದ ಮಾವಿನ ಸುಗ್ಗಿಗೆ ಅಷ್ಟೇನು ಮಹತ್ವಿಲ್ಲದಂತೆ ಕಾಣುತ್ತಿದೆ. ಶೇ.೨೦ ರಷ್ಟು ಫಸಲು ಇಲ್ಲದೇ ಇರುವುದರಿಂದ ಮಾವಿಗೆ ಈ ಸದ್ಯಕ್ಕೆ ಉತ್ತಮ ಧಾರಣ ಕಂಡು ಬರುತ್ತಿದ್ದರೂ ಫಸಲು ಇಲ್ಲದೇ ಇರುವುದರಿಂದ ಈ ಬೆಲೆ ಸಾಲದು ಎನ್ನುವಂತಾಗಿದೆ.
ರಾಜಗಿರ, ಬಾದಾಮಿ, ಮಲ್ಲಿಕಾ ತಳಿಗಳ ಮಾವು ಮಾರುಕಟ್ಟೆಗೆ ಬರುತ್ತಿದೆ, ಈಗಾಗಲೆ ಒಂದು ಮಂಡಿ ಮಾತ್ರ ಪ್ರಾರಂಭಗೊಂಡಿದ್ದು ಉಳಿದಂತೆ ಯಾವ ಮಂಡಿಗಳು ಪ್ರಾರಂಭಗೊಳ್ಳದಿದ್ದರೂ ತೋಟಗಳೇ ಮೇಲೆಯೂ ಕಾಯಿ ಖರೀದಿ ಕಾರ್ಯ ಮುಂದುವರೆದಿದೆ. ಬಾದಾಮಿ ತಳಿ ಟನ್ ಒಂದಕ್ಕೆ ೫೦ ಸಾವಿರದಿಂದ ೭೦ ಸಾವಿರ ತನಕ ಮಾರಾಟವಾಗುತ್ತಿದೆ, ಜ್ಯೂಸ್‌ಗೆ ಖರೀದಿ ಮಾಡುವ ಕಾಯಿ ೫೦ ಸಾವಿರ ಮಾರಾಟವಾಗುತ್ತಿದ್ದರೆ ಗುಣಮಟ್ಟದ ಕಾಯಿ ತಿನ್ನಲು ೭೦ ಸಾವಿರ ತನಕ ಮಾರಾಟವಾಗುತ್ತಿದೆ.ಮಲ್ಲಿಕಾ ತಳಿ ಟನ್ ಒಂದಕ್ಕೆ ೪೦ ಸಾವಿರದಿಂದ ೬೦ ಸಾವಿರ ತನಕ ಮಾರಾಟವಾಗುತ್ತಿದೆ, ರಾಜಗೀರ ಮತ್ತು ರಸಪುರಿ ತಳಿ ಮಾವು ೨೦ ಸಾವಿರದಿಂದ ೪೦ ಸಾವಿರ ತನಕ ಮಾರಾಟವಾಗುತ್ತಿದೆ.

.