ಎಪಿಎಂಸಿಗೆ ಹೆಚ್ಚುವರಿ ಜಮೀನು ಮಂಜೂರಿಗೆ ಒತ್ತಾಯ

ಕೋಲಾರ,ಮೇ.೫: ಟೊಮೋಟೋ ಸುಗ್ಗಿ ಪ್ರಾರಂಭವಾಗುತ್ತಿರುವುದರಿಂದ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹೆಚ್ಚುವರಿ ಜಮೀನನ್ನು ಮಂಜೂರು ಮಾಡಿಸಿಕೊಡಬೇಕೆಂದು ಮಾಜಿ ಸಚಿವರಾದ ಆರ್. ವರ್ತೂರು ಪ್ರಕಾಶ್ ರವರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ಕೋಲಾರ ಕೃಷಿ ಉತ್ಫನ್ನ ಮಾರುಕಟ್ಟೆ ಮಾರುಕಟ್ಟೆಯು ಟೊಮೋಟೋ ವಹಿವಾಟಿಗೆ ದೇಶದಲ್ಲೇ ೨ನೇ ಅತಿ ದೊಡ್ಡ ಪ್ರಮುಖ ಮಾರುಕಟ್ಟೆಯಾಗಿದ್ದು ಮಾರುಕಟ್ಟೆ ಪ್ರಾಂಗಣ ವಿಸ್ತೀರ್ಣ ಕೇವಲ ೧೮ ಎಕರೆ ೩೧ ಗುಂಟೆ ಮಾತ್ರ ಇದ್ದು, ಸ್ಥಳಾವಕಾಶ ಕೊರತೆ ಇದೆ. ಈ ತಾಲೂಕಿನ ರೈತರಲ್ಲದೆ ಇತರೆ ತಾಲೂಕಿನ ಇತರೆ ಜಿಲ್ಲೆಗಳು ಅಂದರೆ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಇತ್ಯಾದಿ ಜಿಲ್ಲೆಗಳಿಂದ ಟೊಮೊಟೋ ಮಾರುಕಟ್ಟೆಗೆ ಅವಕವಿರುತ್ತದೆ. ಇಲ್ಲಿನ ಟೊಮೊಟೋ ದೇಶದ ಎಲ್ಲಾ ರಾಜ್ಯಗಳಿಗೂ ಹಾಗೂ ಹೊರ ದೇಶಗಳಿಗೂ ಮಾರಾಟವಾಗುತ್ತದೆ. ಸುಗ್ಗಿ ಸಮಯದಲ್ಲಿ ದಿನವಹಿ ಸುಮಾರು ೩೦.೦೦೦ ಕ್ವಿಂಟಾಲ್‌ಗಳಿಗೂ ಹೆಚ್ಚು ಟೊಮೊಟೋ ಮಾರುಕಟ್ಟೆ ಪ್ರಾಂಗಣಕ್ಕೆ ಆವಕವಿರುತ್ತದೆ. ರೈತರು ಟೊಮೊಟೋ ಇಳಿಸಿಕೊಳ್ಳಲು ಸ್ಥಳವಿಲ್ಲದೆ ರಸ್ತೆಗಳಲ್ಲಿ ಇಳಿಸುತ್ತಾರೆ. ಹಾಗೂ ವರ್ಷ ಪೂರ್ತಿ ಇಲ್ಲಿನ ಮಾರುಕಟ್ಟೆಗೆ ಟೊಮೊಟೋ ಆವಕವಿರುತ್ತದೆ. ಜೂನ್‌ನಿಂದ ಡಿಸೆಂಬರ್ ಮಾಹೆಯವರೆಗೂ ಟೊಮೊಟೋ ಸುಗ್ಗಿ ಕಾಲವಾಗಿರುತ್ತದೆ. ಈ ಸಮಯದಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಒಟ್ಟಾರೆಯಾಗಿ ಪ್ರತಿನಿತ್ಯ ರೈತರು, ಖರೀದಿದಾರರು, ಹಮಾಲರು, ವಾಹನ ಚಾಲಕರು, ಕ್ಲೀನರ್‍ಗಳು, ಸಾರ್ವಜನಿಕರಾದಿಯಾಗಿ ಸೇರಿದಂತೆ ಹಗಲು ರಾತ್ರಿ ಸುಮಾರು ೪೦೦೦ ಜನರ ಓಡಾಟ ಇರುತ್ತದೆ. ಇದರಿಂದ ಪ್ರಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ ಮತ್ತು ವಾಹನ ದಟ್ಟಣೆ ವಿಪರೀತವಾಗಿರುತ್ತದೆ.
ಕೋಲಾರ ಕೃಷಿ ಉತ್ಫನ್ನ ಮಾರುಕಟ್ಟೆ ಸಮಿತಿಗೆ ಹೆಚ್ಚುವರಿ ಜಮೀನು ಮಂಜೂರಾತಿ ಪಡೆಯಲು ಈ ಹಿಂದೆ ಸಮಿತಿಯು ಕ್ರಮಕೈಗೊಂಡು ಕೋಲಾರ ತಾಲೂಕು ವಕ್ಕಲೇರಿ ಹೋಬಳಿ ಚೆಲುವನಹಳ್ಳಿ ಗ್ರಾಮದ ಸರ್ವೇ ನಂ. ೭೪ ರಲ್ಲಿ ೩೦.೦೪ ಎಕರೆ ಮಂಗಸಂದ್ರ ಗ್ರಾಮದ ಸರ್ವೆ ನಂ ೯೦ ರಲ್ಲಿ೨೯.೩೦ ಎಕರೆ ಜಮೀನನ್ನು ಮಂಜೂರಾತಿ ಪಡೆಯಲು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸದರಿ ಗ್ರಾಮಗಳ ಸರ್ವೇ ನಂ. ಗಳು ಅರಣ್ಯ ಇಲಾಖೆಗೆ ಸೇರಿದ್ದು ಹಾಗೂ ಕೆರೆ ಅಂಗಳ ಪ್ರದೇಶವಾಗಿರುವುದರಿಂದ ಜಮೀನು ಮಂಜೂರಾಗಿರುವುದಿಲ್ಲ. ಪ್ರಸ್ತುತ ಕಪರಸಿದ್ಧನಹಳ್ಳಿ ಗ್ರಾಮದ ಸರ್ವೇ ನಂ. ೦೮ ರಲ್ಲಿನ ೩೩.೧೨ ಎಕರೆ ಜಮೀನು ಹಾಗೂ ಮಡೇರಹಳ್ಳಿ ಗ್ರಾಮದ ಸರ್ವೇ ನಂ. ೩೫ ರಲ್ಲಿನ ೫೦ ಎಕರೆ ಜಮೀನನ್ನು ಮಾರುಕಟ್ಟೆ ಸಮಿತಿಗೆ ಮಂಜೂರು ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾತಿಯನ್ನು ನಿರೀಕ್ಷಿಸಲಾಗಿದೆ.
ಪ್ರಸ್ತುತ ಟೊಮೊಟೊ ಸುಗ್ಗಿಕಾಲ ಪ್ರಾರಂಭವಾಗಿದ್ದು, ಈ ಬಾರಿ ಕೆ.ಸಿ ವ್ಯಾಲಿ ನೀರು ಬಂದಿರುವುದರಿಂದ ರೈತರು ಹೆಚ್ಚಿನ ಟೊಮೊಟೋ ಬೆಳೆದಿರುವುದರಿಂದ ಆವಕ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವುದರಿಂದ ಹಾಗೂ ಕೋವಿಡ್-೧೯ ೨ನೇ ಅಲೆ ಇರುವುದರಿಂದ ಇದನ್ನು ನಿಯಂತ್ರಿಸುವ ಸಲುವಾಗಿ ರೈತರ ಉತ್ಫನ್ನಗಳಿಗೆ ಸ್ಪರ್ಧಾತ್ಮಕ ಧಾರಣೆ ಆಗಲು ಅನಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಯಾವುದಾದೂ ಸೂಕ್ತ ಸರ್ಕಾರಿ ಜಮೀನನನ್ನು ಮಂಜೂರು ಮಾಡಿಕೊಡಲು ಸೂಕ್ತ ಕ್ರಮ ವಹಿಸುವಂತೆ ಕೋರಿದ್ದಾರೆ.
ನಿಯೋಗದಲ್ಲಿ ಎ.ಪಿ.ಎಂ.ಸಿ ಸದಸ್ಯರಾದ ವಿ.ಅಪ್ಪಯ್ಯಪ್ಪ, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್ ಅರುಣ್ ಪ್ರಸಾದ್ ಉಪಸ್ಥಿತರಿದ್ದರು.