ಎಪಿಎಂಸಿಗೆ ಜಾಗ ನೀಡಿ,ರಿಂಗ್‌ರೋಡ್ ಕಾರ್ಯಗತಗೊಳಿಸಿ

ಕೋಲಾರ,ಡಿ,೨೭-ವಿಧಾನಸಭಾ ಚುನಾವಣೆಗೆ ಮುನ್ನಾ ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ತಯಾರಿಸಿದ್ದ ಪ್ರಣಾಳಿಕೆಗೆ ನೀಡಿದ್ದ ಮಾತಿನಂತೆ ಎಪಿಎಂಸಿ ಜಾಗದ ಸಮಸ್ಯೆ, ರಿಂಗ್ ರೋಡ್ ನಿರ್ಮಾಣ ಮತ್ತಿತರ ಭರವಸೆಗಳನ್ನು ಕಾರ್ಯಗತಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿದ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಮುಖ್ಯಮಂತ್ರಿಗಳು ಡಿ.೨೭ ರಂದು ಕೋಲಾರಕ್ಕೆ ಆಗಮಿಸಿ ಪ್ರಗತಿ ಪರಿಶೀಲನೆ ನಡೆಸುವ ಹಿನ್ನಲೆಯಲ್ಲಿ ಈ ಮನವಿ ಸಲ್ಲಿಸಿರುವ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಕುರಿತು ಗಮನ ಸೆಳೆದಿದ್ದಾರೆ.
ರಾಜ್ಯದ ಜನತೆಯ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೊಡನೆ ಕೋಲಾರದ ಅಭಿವೃದ್ದಿಗೆ ತಾವು ನೀಡಿದ್ದ ಭರವಸೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳು,ಸಂಬಂಧಿಸಿದ ಸಚಿವರಿಗೆ ಖುದ್ದು ಭೇಟಿಯಾಗಿ, ಪತ್ರ ಬರೆದಿದ್ದೇನೆ ಮತ್ತು ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ನಸೀರ್‌ಅಹಮದ್, ಅನಿಲ್‌ಕುಮಾರ್ ಸಹ ಸಿಎಂ ಗಮನ ಸೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಾದ ಎಪಿಎಂಸಿ ಎದುರಿಸುತ್ತಿರುವ ಜಾಗದ ಸಮಸ್ಯೆ ಪರಿಹರಿಸಲು ಅಗತ್ಯವಿರುವಷ್ಟು ಜಮೀನು ಮಂಜೂರು ಮಾಡಲು ಮನವಿ ಮಾಡಿದ್ದಾರೆ. ನಗರದ ಅಭಿವೃದ್ದಿ ಹಾಗೂ ಸಂಚಾರ ಸಮಸ್ಯೆ ನಿವಾರಣೆ ದೃಷ್ಟಿಯಿಂದ ಕೋಲಾರಕ್ಕೆ ರಿಂಗ್ ರೋಡ್ ನಿರ್ಮಿಸಲು ಮಂಜೂರಾತಿ,ಅನುದಾನ ನೀಡಲು ಮನವಿ ಮಾಡಿದ್ದಾರೆ.
ಕೋಲಾರ ನಗರದ ಅಭಿವೃದ್ದಿ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು ನಗರಸಭೆಯನ್ನು ನಗರಪಾಲಿಕೆಯಾಗಿ ಪರಿವರ್ತಿಸಲು ನಿಯಮಾನುಸಾರ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನಗರಸಭೆ,ಪುರಸಭೆ,ಪಟ್ಟಣ ಪಂಚಾಯಿತಿಗಳಿಗೆ ಅಧ್ಯಕ್ಷರು,ಉಪಾಧ್ಯಕ್ಷರ ಆಯ್ಕೆಯಾಗದೇ ಆಡಳಿತ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಕೂಡಲೇ ಆ ಹುದ್ದೆಗಳಿಗೆ ಚುನಾವಣೆ ನಡೆಸಲು ಅಗತ್ಯಕ್ರಮಕ್ಕೆ ಮನವಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಮಾಡಲು ಅನುವಾಗುವಂತೆ ವಿದ್ಯಾರ್ಥಿವೇತನ ಹೆಚ್ಚಿಸಲು ಮನವಿ ಮಾಡಿದ್ದಾರೆ.
ರಾಜ್ಯದಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದು ಗ್ಯಾರೆಂಟಿ ಯೋಜನೆಗಳ ಸಮರ್ಪಕ ಜಾರಿ ಮಾಡಿದ್ದೀರಿ, ರಾಜ್ಯದ ಆಡಳಿತ,ಪ್ರಗತಿಯ ಹಿತ ದೃಷ್ಟಿಯಿಂದ ಆಡಳಿತದಲ್ಲಿ ಅನೇಕ ಸುಧಾರಣೆಗಳ ಜಾರಿಗೆ ಮನವಿ ಮಾಡಿದ್ದಾರೆ.