ಎಪಿಎಂಸಿಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯ

ಕೋಲಾರ,ಜೂ,೫-ಎಪಿಎಂಸಿ ಕಾಯ್ದೆ ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಹಾಗೂ ಶ್ರೀನಿವಾಸಪುರ ಎಪಿಎಂಸಿ ಅಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಮಾತನಾಡಿ ಕೃಷಿ ಕ್ಷೇತ್ರದ ಜೀವನಾಡಿಯಾದ ರೈತರು ಬೆವರು ಸುರಿಸಿ ಬೆಳೆದ ಬೆಳೆ ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಶ್ರೀನಿವಾಸಪುರ ಎಪಿಎಂಸಿ ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಸ್ಮಶಾನಗಳಾಗಿ ಮಾರ್ಪಟ್ಟಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಶುಲ್ಕ ಪಾವತಿಸಲು ಆದಾಯವಿಲ್ಲದೆ ಅನಾಥವಾಗುತ್ತಿವೆ ಎಂದು ಎಪಿಎಂಸಿ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ೪ ವರ್ಷದ ಹಿಂದೆ ಜಾರಿಗೆ ತಂದಿದ್ದ ಮೂರು ಕಾಯ್ದೆ ರೈತರ ಹೋರಾಟದ ಪ್ರತಿಫಲ ವಾಪಸ್ ಪಡೆಯಿತು. ಆದರೆ, ರಾಜ್ಯ ಸರ್ಕಾರ ತನ್ನ ಮೊಂಡುತನದಿಂದ ಯಾವುದೇ ಕಾಯಿದೆ ವಾಪಸ್ ಪಡೆಯದೆ ಅದನ್ನೇ ಮುಂದುವರೆಸಿದ ಹಿನ್ನೆಲೆಯಲ್ಲಿ ಎಪಿಎಂಸಿಗೆ ಬರುತ್ತಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ವಿಶ್ವ ವಿಖ್ಯಾತಿ ಮಾವಿನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬದುಕು ಕಟ್ಟಿಕೊಳ್ಳಲು ಬರುವ ಕೂಲಿ ಕಾರ್ಮಿಕರು, ವರ್ಷಪೂರ್ತಿ ಬೆವರು ಸುರಿಸಿ ಮನೆ ಮಕ್ಕಳಂತೆ ಸಾಕುವ ರೈತರು, ಆರೋಗ್ಯದಿಂದ ಬಂದು ಅನಾರೋಗ್ಯ ಪೀಡಿತರಾಗಿ ಮನೆಗೆ ವಾಪಸ್ ಹೋಗುವ ಮಟ್ಟಕ್ಕೆ ಮಾರುಕಟ್ಟೆ ವ್ಯವಸ್ಥೆ ಹದಗೆಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾಯಿದೆಯಿಂದ ಎಪಿಎಂಸಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಯಾರ್ಡ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರು ಎಪಿಎಂಸಿ ಆಡಳಿತ ಮಂಡಳಿಯ ಕೈತಪ್ಪಿ ತಮಗಿಷ್ಟ ಬಂದ ರೀತಿ ವ್ಯಾಪಾರ ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿರುವ ಜೊತೆಗೆ ಮಾರುಕಟ್ಟೆಗೆ ವರ್ತಕರು ಪಾವತಿಸುತ್ತಿದ್ದ ಸೆಸ್ ಶೇ.೧.೫ ರಿಂದ ಶೇ.೦.೬೦ಕ್ಕೆ ಇಳಿಕೆ ಮಾಡಿ ಎಪಿಎಂಸಿಯಿಂದ ಹೊರಗಡೆ ವ್ಯಾಪಾರ ಮಾಡುವ ಮುಖಾಂತರ ಪಾವತಿಸಬೇಕಾದ ಸೆಸ್ ಹಣಕ್ಕೂ ಹೊಡೆತ ಬಿದ್ದಿದೆ ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ತೆರ್‍ನಹಳ್ಳಿ ಆಂಜಿನಪ್ಪ, ಆಲವಾಟ ಶಿವ, ಶೇಕ್ ಶಫಿಉಲ್ಲಾ, ವೆಂಕಟ್ ಇದ್ದರು.