ಎಪಿಎಂಪಿ ಸಂಘ-ಮತದಾನಕ್ಕೆ ಕನಿಷ್ಟ ವ್ಯವಹಾರ ಅಗತ್ಯ-ಶಿವಣ್ಣ

ಮುಳಬಾಗಿಲುನ೧೯:ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಡಿ.೬ ರಂದು ರೈತ ಸಮುದಾಯ ಭವನದ ಆವರಣದಲ್ಲಿ ಏರ್ಪಡಿಸಲಾಗಿದ್ದು ಸಂಘದ ೧೪೭೦ ಸದಸ್ಯರು ಸಭೆಯಲ್ಲಿ ಚರ್ಚೆ ನಡೆಸಿ ಸಲಹೆ ಸೂಚನೆಗಳನ್ನು ನೀಡಬಹುದು, ಸದಸ್ಯರೆಲ್ಲರೂ ಕಡ್ಡಾಯವಾಗಿ ವಾರ್ಷಿಕ ಮಹಾ ಸಭೆಗೆ ಹಾಜರಾಗುವುದರ ಜೊತೆಗೆ ಸಂಘದಲ್ಲಿ ಕನಿಷ್ಟ ವ್ಯವಹಾರ ಮಾಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮತ್ತು ಮತದಾನಕ್ಕೆ ಅವಕಾಶವಿರುತ್ತದೆ ಎಂದು ಅಧ್ಯಕ್ಷ ಆಲಂಗೂರು ಶಿವಣ್ಣ ತಿಳಿಸಿದರು.
ಟಿ.ಎ.ಪಿ.ಸಿ.ಎಂ.ಎಸ್ ನಲ್ಲಿ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ನಮ್ಮ ಆಡಳಿತ ಮಂಡಳಿ ಬಂದ ನಂತರ ಪುರಸಭೆ ಮತ್ತು ನಗರಸಭೆಗೆ ಕಳೆದ ೩೫ ವರ್ಷಗಳಿಂದ ತೆರಿಗೆ ಪಾವತಿ ಮಾಡದೆ ಇದ್ದು ಸುಮಾರು ೩೦ ಲಕ್ಷ ತೆರಿಗೆ ಹಣವನ್ನು ಪಾವತಿ ಮಾಡಲಾಗಿದೆ, ಸುಮಾರು ಒಂದೂವರೆ ಕೋಟಿ ಮೌಲ್ಯದ ಆಸ್ತಿಯನ್ನು ರಕ್ಷಣೆ ಮಾಡಲಾಗಿದೆ, ರೈತ ಸಮುದಾಯ ಭವನದ ಆವರಣ ಒತ್ತುವರಿಯನ್ನು ತೆರವುಗೊಳಿಸಲಾಗಿದೆ, ಈ ಖಾತೆಗೆ ಅರ್ಜಿ ಸಲ್ಲಿಸಿದ್ದು ಅದಾದ ನಂತರ ಸರ್ವೆ ಮಾಡಿಸಿ ಸರ್ವೆ ಪ್ರಕಾರ ಯಾರಾದರೂ ಒತ್ತುವರಿ ಮಾಡಿದ್ದರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು ಎಂದರು.
ಈ ಸಾಲಿನಲ್ಲಿ ಯೂರಿಯಾ ರಸಗೊಬ್ಬರ ಅಭಾವ ಕಂಡುಬಂದಿದ್ದರೂ ಸಂಘದ ವತಿಯಿಂದ ಮುಳಬಾಗಿಲಿನಲ್ಲಿ ೧೦೦ ಟನ್, ಎನ್.ವಡ್ಡಹಳ್ಳಿಯಲ್ಲಿ ೧೦೦ ಟನ್ ಮಾರಾಟ ಮಾಡಲಾಗಿದೆ, ಸಹಕಾರಿ ಸಂಸ್ಥೆ ಇಫ್ಕೋದಿಂದ ಯೂರಿಯಾವನ್ನು ತರಿಸಿ ರೈತರಿಗೆ ಕೃಷಿ ಇಲಾಖೆ ನಿಯಮದಂತೆ ನಿಗದಿತ ಬೆಲೆಗೆ ಮಾರಾಟ ಮಾಡಲಾಗಿದೆ, ಪಶು ಆಹಾರ ಸೇರಿದಂತೆ ರೈತರಿಗೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಇದರಿಂದ ಸಂಘಕ್ಕೆ ಲಾಭವೂ ಬರುತ್ತಿದೆ, ಈಗಿನ ಆಡಳಿತ ಮಂಡಳಿ ಸದಸ್ಯರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ನಿರ್ದೇಶಕ ಎಂ.ಎಸ್.ಗೋವಿಂದರಾಮ್ ಮಾತನಾಡಿ ಹಿಂದೆ ಮಾಡಲಾಗಿದ್ದ ಸಾಲವನ್ನು ಈ ಆಡಳಿತ ಮಂಡಳಿ ಅವಧಿಯಲ್ಲಿ ತೀರಿಸುವುದರ ಜೊತೆಗೆ ಯಾವುದೇ ಸಾಲವನ್ನು ಮಾಡದೆ ಸಂಘಕ್ಕೆ ಲಾಭ ತರಲಾಗಿದೆ ಕೆಲವರು ಸಂಘದ ಬಗ್ಗೆ ವೃಥಾ ಆರೋಪ ಮಾಡಿರುವುದು ಸರಿಯಲ್ಲ, ಹಿಂದಿನ ಆಡಳಿತ ಮಂಡಳಿಗಳ ಬಗ್ಗೆ ನಾವು ಪ್ರಸ್ತಾಪಿಸುವುದಿಲ್ಲ ನಮ್ಮ ಅವಧಿಯಲ್ಲಿ ಮಾತ್ರ ಉತ್ತಮವಾಗಿ ಆಡಳಿತ ನೀಡಿದ್ದೇವೆ, ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹಾಗೂ ಶಿವಣ್ಣ ಅಧ್ಯಕ್ಷರಾಗಿರುವ ಈ ಅವಧಿಯಲ್ಲೂ ಸಹಾ ಅಭಿವೃದ್ಧಿ ಪಥದತ್ತ ಸಾಗಿದ್ದೇವೆ ಎಂದರು.
ನಿರ್ದೇಶಕ ಕೆ.ಎನ್.ಕೃಷ್ಣಪ್ಪ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎ.ರಾಮಕೃಷ್ಣ ಇದ್ದರು.
೧೮ ಎಂ.ಬಿ.ಎಲ್ ಫೋಟೊ ೧: ಮುಳಬಾಗಿಲು ಟಿ.ಎ.ಪಿ.ಸಿ.ಎಂ.ಎಸ್ ನಲ್ಲಿ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತಿರುವ ಅಧ್ಯಕ್ಷ ಆಲಂಗೂರು ಶಿವಣ್ಣ, ನಿರ್ದೇಶಕರಾದ ಎಂ.ಎಸ್.ಗೋವಿಂದರಾಮ್ ಕೆ.ಎನ್.ಕೃಷ್ಣಪ್ಪ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎ.ರಾಮಕೃಷ್ಣ ಇದ್ದರು.