
ಬೀದರ್ ಫೆ.23: ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಹೆಚ್.ಎಂ ನೌಕರರನ್ನು ಕೂಡಲೇ ಖಾಯಂಗೊಳಿಸಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ನಡೆದ ಬಜೆಟ್ ಅಧಿವೇಶನದ ಹತ್ತನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಎನ್.ಹೆಚ್.ಎಂ ನೌಕರರ ವಿಷಯದಲ್ಲಿ ಹಿರಿಯೂರು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾರವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉಪಪ್ರಶ್ನೆ ಕೇಳಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅವರು, ಎನ್.ಹೆಚ್.ಎಂ ನೌಕರರನ್ನು ಪರ್ಮನೆಂಟ್ ಮಾಡಿ ಎಂದರು.
ಎನ್.ಹೆಚ್.ಎಂ ನೌಕರರನ್ನು ಪರ್ಮನೆಂಟ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಈಗ ನಾವು ಎನ್.ಹೆಚ್.ಎಂ ನೌಕರರ ಪರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಎನ್.ಹೆಚ್.ಎಂ ನೌಕರರು ಬಹಳಷ್ಟು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಂತಹ ಕಷ್ಟದ ಸಂದರ್ಭದಲ್ಲಿ ಕೂಡ ಅವರು ಒಳ್ಳೆ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ರೆಗ್ಯುಲರ್ ಸ್ಟಾಪ್ ನಷ್ಟೇ ಎನ್.ಹೆಚ್.ಎಂ ನೌಕರರು ಕೆಲಸ ಮಾಡುತ್ತಾರೆ.
ಈಗ ಸರ್ಕಾರ 15% ಶ್ಯಾಲರಿ ಹೈಕ್ ಮಾಡ್ತಿವಿ ಎಂದಿದೆ. 15-20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ಖಾಯಂಗೊಳಿಸಬೇಕು. ಮಣಿಪುರ, ಒಡಿಶಾ, ರಾಜಸ್ಥಾನ, ಪಂಜಾಬ್, ಹಿಮಾಚಲ್ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಎನ್.ಹೆಚ್.ಎಂ ನೌಕರರನ್ನು ಖಾಯಂಗೊಳಿಸಲಾಗಿದೆ. ಸರ್ಕಾರ ಅಲ್ಲಿನ ಮಾಹಿತಿಯನ್ನು ತರೆಸಿಕೊಂಡು ನಮ್ಮಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 30 ಸಾವಿರ ಜನ ಎನ್.ಹೆಚ್.ಎಂ ನೌಕರರನ್ನು ಖಾಯಂಗೊಳಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.