ಎನ್ ಸಿಟಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ , ಮಾ. ೨೯: ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ- ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರ (ತಿದ್ದುಪಡಿ) ಮಸೂದೆ-೨೦೨೧ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಹಿ ಹಾಕಿದ್ದಾರೆ.
ಈ ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿರುವುದರಿಂದ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕಿಂತ ಗವರ್ನರ್ ಗೆ ಹೆಚ್ಚಿನ ಅಧಿಕಾರ ಸಿಗಲಿದೆ.
ಚುನಾಯಿತ ಸರ್ಕಾರ ಕಾರ್ಯಾಂಗಕ್ಕೆ ಸಂಬಂಧಪಟ್ಟ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ಇನ್ನು ಮುಂದೆ ಎಲ್-ಜಿ ಅಭಿಪ್ರಾಯವನ್ನೂ ಸಂಗ್ರಹಿಸಬೇಕಾಗುತ್ತದೆ. ಕಳೆದ ವಾರ ಈ ಮಸೂದೆಯನ್ನು ಲೋಕಸಭೆ, ರಾಜ್ಯಸಭೆಗಳಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಮಸೂದೆಯನ್ನು ದೆಹಲಿ ಜನತೆಗೆ ಮಾಡಿದ ಅವಮಾನವೆಂದು ಹೇಳಿದ್ದರು. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಈ ಮಸೂದೆಯನ್ನು ಸಮರ್ಥಿಸಿದ್ದು, ದೆಹಲಿಯ ಎನ್ ಸಿ ಟಿ ಆಡಳಿತ ಹಾಗೂ ಸಾರ್ವಜನಿಕ ಹೊಣೆಗಾರಿಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ತಂದುಕೊಡಲಿದೆ ಎಂದು ಹೇಳಿದ್ದಾರೆ.