ಎನ್.ಟಿ.ಬಿ ಬಳಗ ಕಾಂಗ್ರೆಸ್ ಸೇರ್ಪಡೆ,  ಕೂಡ್ಲಿಗಿಯಲ್ಲಿ ‘ಕೈ’ಗೆ ಬಲ,


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ. 21 :- ಐದಾರು ದಶಕಗಳ ಕಾಲ ರಾಜಕೀಯದ ಏಳುಬೀಳು ಕಂಡು ಎರಡು ಬಾರಿ ಶಾಸಕರಾಗಿ ಇತ್ತೀಚಿಗೆ ದಿವಂಗತರಾದ ಎನ್.ಟಿ.ಬೊಮ್ಮಣ್ಣನವರ ಪುತ್ರರು  ಅಪಾರ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ  ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಕಾಂಗ್ರೇಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕೂಡ್ಲಿಗಿ ಕ್ಷೇತ್ರದಲ್ಲಿ ಕೈ ಪಕ್ಷ ಬಲ ಪಡಿಸುವ ಜೊತೆಗೆ  ಎನ್ ಟಿ ಬಿ ಕಿರಿಯ ಪುತ್ರ ನೇತ್ರ ತಜ್ಞ ಡಾ ಶ್ರೀನಿವಾಸ ರಾಜಕೀಯ ಪ್ರವೇಶ ಮಾಡುವ ಮೂಲಕ ಕೂಡ್ಲಿಗಿ ಕ್ಷೇತ್ರದ ಕಾಂಗ್ರೇಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗುತ್ತಿದ್ದಾರೆಂದೇ ಹೇಳಬಹುದಾಗಿದೆ. 
ಹೌದು, ಈಗಾಗಲೇ ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿ  ಬಳ್ಳಾರಿ, ವಿಜಯನಗರ ಜಿಲ್ಲೆಯ ಪ್ರಮುಖ ಮುಖಂಡರು, ಮಾಜಿ ಸಚಿವರು, ಶಾಸಕರನ್ನು ಭೇಟಿ ಮಾಡಲಾಗಿದ್ದು ಅವಳಿ  ಜಿಲ್ಲೆಯ ಕಾಂಗ್ರೇಸ್ ಪಕ್ಷದ ಶಾಸಕರು, ಮಾಜಿ ಸಚಿವರು, ಮುಖಂಡರು ಹಾಗೂ ಇತರರ ಸಮ್ಮುಖದಲ್ಲಿ ಇಂದು ಕೂಡ್ಲಿಗಿಯ ಮಾಜಿ ಶಾಸಕ ದಿ.ಎನ್.ಟಿ.ಬಿಯವರ ಪುತ್ರರಾದ ಡಾ.ಎನ್.ಟಿ.ಶ್ರೀನಿವಾಸ್, ಎನ್.ಟಿ.ತಮ್ಮಣ್ಣ ಸೇರಿ ಅನೇಕ ಬೆಂಬಲಿಗರು, ಮುಖಂಡರು ಹಾಗೂ ಕಾರ್ಯಕರ್ತರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರು ಇತ್ತೀಚಿಗೆ ಅನಾರೋಗ್ಯದಿಂದ ನಿಧನರಾದ ನಂತರ, ಅವರ ಕಟ್ಟಾ ಅಭಿಮಾನಿಗಳಲ್ಲಿ ಮುಂದೇನು ಎಂಬ ಚಿಂತೆಯ ಕಾರ್ಮೋಡ ಕವಿದಂತಾಗಿತ್ತು. ಜೆಡಿಎಸ್‌ನಲ್ಲಿದ್ದ ಎನ್.ಟಿ.ಬಿ ಕುಟುಂಬದವರು ಮತ್ತು ಬೆಂಬಲಿಗರು ಸೂಕ್ತ ಜನತೆಯ ಅಭಿಮಾನಿ ಬಳಗದ ನಿರ್ಧಾರದ ಮೂಲಕ ‘ತೆನೆಹೊತ್ತ ಮಹಿಳೆ’ ಪಕ್ಷವನ್ನು ಬಿಟ್ಟು ‘ಕೈ’ ಹಿಡಿಯುವ ನಿರ್ಧಾರದಿಂದ ರಾಜಕೀಯ ರಂಗಪ್ರವೇಶಕ್ಕೆ ಮುಂದಾಗಿರುವುದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಎನ್.ಟಿ.ಬಿ ಅಭಿಮಾನಿಗಳಲ್ಲಿ ಉತ್ಸಾಹದ ಚಿಲುಮೆ ಉಕ್ಕುತ್ತಿದೆ.
 ಬಯಕೆ ಈಡೇರಿಸುವ ಆಸೆ..
ಕೂಡ್ಲಿಗಿ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರಾಗಿದ್ದ ಬೊಮ್ಮಣ್ಣ ಎರಡು ಬಾರಿ ಕೂಡ್ಲಿಗಿ ಕ್ಷೇತ್ರದ  ಶಾಸಕರಾಗಿದ್ದರು  ನಂತರ  ಅವರು ಕೊಟ್ಟೂರು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಆ ಪಕ್ಷಕ್ಕೆ ಗುಡ್‌ಬೈ ಹೇಳಿದ್ದರು. ನಂತರ, ಕ್ಷೇತ್ರ ಪುನರ್ವಿಂಗಡಣೆ ನಂತರ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಸೇರಿದ್ದರೂ ರೆಡ್ಡಿಗಳ ಬಿಜೆಪಿ ದರ್ಭಾರಿನಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ಸಿಗದ ಹಿನ್ನೆಲೆ ‘ಕಮಲ’ದ ಸ್ನೇಹವನ್ನು ತೊರೆದಿದ್ದರು. ಕೊನೆಗೇ, ಕ್ಷೇತ್ರದ ಜನರ ಸೇವೆ ಮಾಡಬೇಕೆಂಬ ತುಡಿತದಿಂದ ಎನ್.ಟಿ.ಬೊಮ್ಮಣ್ಣನವರು, ಜೆಡಿಎಸ್ ಸೇರ್ಪಡೆಯಾಗಿ ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾಗಿಯೂ ಪಕ್ಷಕ್ಕೆ ಬಲ ತುಂಬಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಲ್ಲಿ ಎರಡ್ಮೂರು ಬಾರಿ ಸ್ಪರ್ಧಿಸಿ ಸೋತಿದ್ದರು. ಆದರೆ, ಜೀವನದ ಕೊನೆಯಲ್ಲಿ ಮತ್ತೊಮ್ಮೆ ಶಾಸಕರಾಗುವ ಬಯಕೆಯಿಂದ 2018ರಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಪರೀಕ್ಷೆಗೆ ಮುಂದಾಗಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರ ಎದುರು ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದ ಎನ್.ಟಿ.ಬಿಯವರ ಶಾಸಕರಾಗುವ ಬಯಕೆ ಈಡೇರಲೇ ಇಲ್ಲ. ಹೀಗಾಗಿ, ಎನ್.ಟಿ.ಬೊಮ್ಮಣ್ಣ ಅವರ ಪುತ್ರರಲ್ಲಿ ಒಬ್ಬರಾದ ಡಾ.ಎನ್.ಟಿ.ಶ್ರೀನಿವಾಸ್ ಅವರನ್ನು ಶಾಸಕರಾಗಿ ಮಾಡಬೇಕೆಂಬ ಮಹದಾಸೆಯೊಂದಿಗೆ ಎನ್.ಟಿ.ಬಿಯವರ ಬೆಂಬಲಿಗರು ಮುಂದಾಗಿ ಚರ್ಚಿಸಿ ಇಂದು  ಪುತ್ರರು ಹಾಗೂ ಅಪಾರ ಬೆಂಬಲಿಗರು ‘ಕೈ’ ಸೇರಲು ಮುಂದಾಗಿ ಎನ್.ಟಿ.ಬೊಮ್ಮಣ್ಣ ಅವರ ಕೊನೆಯ ಬಯಕೆ ಈಡೇರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕೂಡ್ಲಿಗಿ ತಾಲೂಕಿನ ಅಭಿಮಾನ ಮರೆಯದ ಡಾಕ್ಟರ್..
ದಿ.ಎನ್.ಟಿ.ಬೊಮ್ಮಣ್ಣ ಅವರ ಪುತ್ರ ಡಾ.ಎನ್.ಟಿ.ಶ್ರೀನಿವಾಸ್ ಅವರು ಕಣ್ಣಿನ ವೈದ್ಯರು. ಅವರು ತುಮಕೂರಿನಲ್ಲಿ ತಮ್ಮದೇ ಸ್ವಂತ ಆಸ್ಪತ್ರೆ ಕಟ್ಟಿಕೊಂಡು ಜನರ ಸೇವೆಗೆ ಮುಂದಾಗಿದ್ದಾರೆ. ದೂರದ ತುಮಕೂರಿನಲ್ಲಿದ್ದರೂ ಕೂಡ್ಲಿಗಿ ತಾಲೂಕಿನ ಅಭಿಮಾನ ಮಾತ್ರ ಮರೆತಿಲ್ಲ ಎನ್ನುವುದಕ್ಕೆ ಕಣ್ಣಿನ ಸಮಸ್ಯೆ, ಶಸ್ತ್ರಚಿಕಿತ್ಸೆಗೆಂದು ಕೂಡ್ಲಿಗಿ ತಾಲೂಕಿನಿಂದ ತುಮಕೂರಿಗೆ ಯಾರೇ ಹೋದರೂ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಸೇರಿ ಇತರೆ ಚಿಕಿತ್ಸೆ ನೀಡಿ ಕಳಿಸಿರುವುದು ಅವರಲ್ಲಿರುವ ಕಾಳಜಿಯನ್ನು ತೋರುತ್ತದೆ.
 ಕಾಂಗ್ರೆಸ್ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿ..
ಕೂಡ್ಲಿಗಿ ತಾಲೂಕಿನಲ್ಲಿ ನಾಲ್ಕೈದು ದಶಕಗಳ ಕಾಲ  ರಾಜಕೀಯದಲ್ಲಿ  ಮಾಜಿ ಶಾಸಕ ದಿ.ಎನ್.ಟಿ.ಬಿಯವರು  ಸಕ್ರಿಯರಾಗಿದ್ದರು. ಅವರ ಕುಟುಂಬದ ಕುಡಿಯಾದ ಡಾ.ಎನ್.ಟಿ.ಶ್ರೀನಿವಾಸ್ ಅವರು ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದರ ಜೊತೆಗೆ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಮಾತು. ಹೀಗಾಗಿ, ಕ್ಷೇತ್ರದಿಂದ ಪಕ್ಷದ ಟಿಕೆಟ್‌ಗಾಗಿ ಅನೇಕ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದರೂ, ಡಾ.ಎನ್.ಟಿ. ಶ್ರೀನಿವಾಸ್ ಸಹ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುತ್ತಾರೆಂಬ ಮಾಹಿತಿಯೂ ಲಭ್ಯವಾಗಿದೆ.

 ಕೂಡ್ಲಿಗಿ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳ ಮುಖಂಡರು, ಹಿತೈಷಿಗಳು, ಹಿರಿಯರ ಮಾರ್ಗದರ್ಶನದಿಂದ ನಮ್ಮ ಕುಟುಂಬದವರು ಸೇರಿ ಎನ್.ಟಿ.ಬಿಯವರ ಅಪಾರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸೇರಲಿದ್ದೇವೆ. ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ಮುಖಂಡರನ್ನು ಈಗಾಗಲೇ ಸಂಪರ್ಕ ಮಾಡಿದ್ದೇನೆ.
– ಡಾ.ಎನ್.ಟಿ. ಶ್ರೀನಿವಾಸ್, ಮಾಜಿ ಶಾಸಕ ಎನ್.ಟಿ.ಬಿ ಪುತ್ರ.