ಎನ್.ಜಿ.ಇ.ಎಫ್. ಪುನಶ್ಚೇತನಕ್ಕೆ ಕ್ರಮ: ಸಚಿವ ಪಾಟೀಲ

ಧಾರವಾಡ,ಜೂ27 : ಉತ್ಕøಷ್ಟ ಗುಣಮಟ್ಟದ ಮೋಟಾರುಗಳು ಮತ್ತು ಟ್ರಾನ್ಸ್‍ಫಾಮರ್ಗಳ ತಯಾರಿಕೆಗೆ ಹೆಸರಾಗಿರುವ ಹುಬ್ಬಳ್ಳಿ ಎನ್‍ಜಿಇಎಫ್ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಅವರು ಎನ್‍ಜಿಎಎಫ್ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಎನ್‍ಜಿಇಎಫ್ ನಷ್ಟದ ಸುಳಿಯಲ್ಲಿರುವುದು ಬೇಸರದ ಸಂಗತಿ. ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಕಾರ್ಖಾನೆಯ ಪುನಶ್ಚೇತನ ಕುರಿತು ತಜ್ಞರ ಜತೆ ಚರ್ಚಿಸಿ, ಇದಕ್ಕೆ ಬೇಕಾದ ಹಣಕಾಸು ಸೌಲಭ್ಯ ಒದಗಿಸುವ ಕುರಿತು ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ಇಲ್ಲಿ ತಯಾರಾಗುವ ಟ್ರಾನ್ಸ್‍ಫಾರ್ಮರ್‍ಗಳನ್ನು ನೂತನ ಸಂಸತ್ ಭವನ ಸೇರಿದಂತೆ ರಕ್ಷಣಾ ಇಲಾಖೆ, ಇಸ್ರೋದಂತಹ ಪ್ರಮುಖ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದಕ್ಕೆ ಅಗತ್ಯ ಮಾರುಕಟ್ಟೆ ಸೃಷ್ಟಿಸುವ ತುರ್ತು ನಮ್ಮ ಮುಂದಿದೆ. ಎನ್‍ಜಿಇಎಫ್ ಮೇಲೆತ್ತಲು ಸರಕಾರವೂ ಉತ್ಸುಕವಾಗಿದೆ ಎಂದು ಅವರು ತಿಳಿಸಿದರು.
ಗಾಮನಗಟ್ಟಿಯ ಇನ್‍ಫ್ರಾ ಫೈನ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‍ಗೆ ಭೇಟಿ ನೀಡಿದ ಸಚಿವರು, ಅಲ್ಲಿ ವಿವಿಧ ಹಣ್ಣುಗಳ ತಿರುಳನ್ನು ತೆಗೆದು, ಅದನ್ನೆಲ್ಲ ಅಚ್ಚುಕಟ್ಟಾಗಿ ಅಮೆರಿಕ, ಜಪಾನ್ ಮತ್ತು ಯೂರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಬಗ್ಗೆ ತಿಳಿದುಕೊಂಡರು. ಜತೆಗೆ ಕಂಪನಿಯು ಕೆಲವೇ ವರ್ಷಗಳಲ್ಲಿ 100 ಕೋಟಿ ರೂ. ಮೊತ್ತದ ರಫ್ತು ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿರುವುದನ್ನು ಕಂಡು ಆಶ್ಚರ್ಯಚಕಿತರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾವು, ಪೇರಲೆ, ಅನಾನಸ್ ಇತ್ಯಾದಿ ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿಸಿ, ಇಂತಹ ಉದ್ದಿಮೆ ಸ್ಥಾಪಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ರೈತರಿಗೂ ಆರ್ಥಿಕವಾಗಿ ಲಾಭವಾಗಲಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಕುಸಿದರೂ ಇಂತಹ ಕಂಪನಿಗಳನ್ನು ನೆಚ್ಚಿಕೊಳ್ಳಬಹುದು. ಇದರಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯೂ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ರಾಜ್ಯದಲ್ಲಿ ಕೃಷಿ ಆಧಾರಿತ ಉದ್ಯಮಗಳಿಗೆ ಹೇರಳ ಅವಕಾಶಗಳಿವೆ. ರೈತರು ತಮ್ಮ ಜಮೀನಿನಲ್ಲೇ ಇಂತಹ ಉದ್ದಿಮೆ ಸ್ಥಾಪಿಸಲು ಮುಂದಾದರೆ ಅವರಿಗೆ ಸರಕಾರವು ಅನುಕೂಲ ಒದಗಿಸಲಿದೆ. ಮುಖ್ಯವಾಗಿ, ಕೃಷಿ ಭೂಮಿಯನ್ನು ಕೈಗಾರಿಕೋದ್ದೇಶದ ಬಳಕೆಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಚಿಂತಿಸಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ದೈನಂದಿನ ಬಳಕೆಯ ಉತ್ಪನ್ನಗಳನ್ನು ತಯಾರಿಸುವ ಏಕಸ್ ಉದ್ಯಮಕ್ಕೆ ಭೇಟಿ ನೀಡಿದರು. ಕೆಐಎಡಿಬಿ ಒದಗಿಸಿರುವ 300 ಎಕರೆ ಭೂಮಿಯಲ್ಲಿ ಸ್ವತಃ ಕಂಪನಿಯೇ ಎಸ್‍ಇಜೆಡ್ ಅಭಿವೃದ್ಧಿ ಪಡಿಸಿ, ವಿವಿಧ ಉದ್ದಿಮೆಗಳಿಗೆ ಸ್ಥಳಾವಕಾಶ ನೀಡುತ್ತಿರುವುದನ್ನು ಅವರು ವೀಕ್ಷಿಸಿದರು. ಇಲ್ಲಿ ತಯಾರಾಗುವ ಕಾವಲಿ (ತವಾ), ದೊಡ್ಡ ಪಾತ್ರೆಗಳು, ತಟ್ಟೆಗಳನ್ನು ವೀಕ್ಷಿಸಿದರು.
ಈಟಿಗಟ್ಟಿಯಲ್ಲಿರುವ ಧಾರವಾಡ ಎಸ್‍ಇಜೆಡ್ ವಲಯದ ಮೈಕ್ರೋಫಿನಿಷ್ ವಾಲ್ವ್ಸ್ ಪ್ರೈವೇಟ್ ಲಿ., ಕಂಪನಿಗೆ ತೆರಳಿದರು. ಕಂಪನಿಯು ತಯಾರಿಸುವ ಬೃಹತ್ ಗಾತ್ರದ, ಔದ್ಯಮಿಕ ಬಳಕೆಗೆ ಬರುವ ವಾಲ್ವ್‍ಗಳ ಬಗ್ಗೆ ಅಲ್ಲಿನ ಉನ್ನತ ಪ್ರತಿನಿಧಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೆಐಎಡಿಬಿ ಆಯುಕ್ತ ಮಹೇಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು, ಎನ್‍ಜಿಇಎಫ್ ಉಪ ಮಹಾ ವ್ಯವಸ್ಥಾಪಕ ನರೇಗಲ್ ಮತ್ತು ಭಾರೀ ಹಾಗೂ ಮಧ್ಯಮ ಕೈಗಾರಕಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.