
ಶಹಾಪೂರ:ಆ.26:ಪ್ರಸ್ತುತ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ, ಸೌಹಾರ್ದತೆ, ಪರಸ್ಪರ ಅರ್ಥೈಸಿಕೊಳ್ಳುವುದು, ಗೌರವಿಸುವುದು ಮುಂತಾದ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯವಿದೆ. ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮಾಡುವ ತರಬೇತಿ ಕೇಂದ್ರಗಳಾಗಿವೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಂಕ್ರಮ್ಮ ಪಾಟೀಲ ಅವರು ಅಭಿಪ್ರಾಯಪಟ್ಟರು.
ರಸ್ತಾಪುರ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್. ‘ಎ’ ಮತ್ತು ‘ಬಿ’ ಘಟಕಗಳ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಉದ್ಘಾಟಿಸಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದ ಅವರು ಬದುಕಿನಲ್ಲಿ ಸರಳತೆ, ಸಹೃದಯತೆ, ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ಸಂಸ್ಕಾರಗಳು ಅತ್ಯಂತ ಅವಶ್ಯಕವಾಗಿವೆ. ಕೀಳರಿಮೆಯನ್ನು ತೊರೆದು ಸಾಧನೆ ಮತ್ತು ಚಾರಿತ್ರ್ಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಎನ್.ಎಸ್.ಎಸ್.ಶಿಬಿರಗಳು ವಿದ್ಯಾರ್ಥಿಗಳಿಗೆ ಬದುಕಿನ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುವ ಸಾಮಥ್ರ್ಯವನ್ನು ಕಲಿಸಿಕೊಡುವುದರ ಜೊತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಹಲವಾರು ನಿರ್ದೇಶನಗಳ ಮೂಲಕ ತಿಳಿಸಿಕೊಟ್ಟರು.
ಆರ್.ವಿ. ಕಾಲೇಜಿನ ಪ್ರಾಂಶುಪಾಲ ಕನ್ನಡ ಅಧ್ಯಾಪಕ ದೇವಿಂದ್ರಪ್ಪ ಆಲ್ದಾಳ ಅವರು ಮಾತನಾಡಿ ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ರಚನಾತ್ಮಕ ಸಂಬಂಧ ಬೆಳೆಯಬೇಕು, ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಅನೇಕ ಆಶಯಗಳನ್ನು ಎನ್.ಎಸ್.ಎಸ್. ಹೊಂದಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಶಿವಲಿಂಗಣ್ಣ ಸಾಹು ಅಧ್ಯಕ್ಷತೆ ವಹಿಸಿದ್ದರು.
ಎನ್.ಎಸ್.ಎಸ್. ‘ಬಿ’ ಘಟಕದ ಅಧಿಕಾರಿ ಗಂಗಪ್ಪ ಎಸ್. ಹೊಸಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್. ‘ಎ’ ಘಟಕದ ಅಧಿಕಾರಿ ರಾಘವೇಂದ್ರ ಹಾರಣಗೇರಾ ಅವರು ಎನ್.ಎಸ್.ಎಸ್. ದ್ಯೇಯೋದ್ಧೇಶಗಳನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶರಬಣ್ಣ ಸಾಹು ಅಂಗಡಿ, ಉದ್ದಿಮೆದಾರರಾದ ಮಹಾಂತೇಶ ತುಂಬಗಿ, ಬಸವರಾಜ ಅಂಗಡಿ, ಅಧ್ಯಾಪಕರಾದ ಸೈಯದ್ ಚಾಂದಪಾಶ, ಶುಭಲಕ್ಷ್ಮಿ ಸಂಖಾ, ಗೀತಾ ಜಿ.ಎಚ್. ಹಣಮಂತ ಚನ್ನೂರು, ಶೇಖಪ್ಪ ವಾರಿ, ಯಂಕಪ್ಪ ಕೊಳುರು ಮುಂತಾದವರು ಉಪಸ್ಥಿತರಿದ್ದರು. ಸಾವಿತ್ರಿಬಾಯಿಪುಲೆ ಮತ್ತು ಜ್ಯೋತಿಬಾಪುಲೆ ಛದ್ಮಾ ವೇಷದಲ್ಲಿ ವಿದ್ಯಾರ್ಥಿಗಳಾದ ಶಿಲ್ಪಾ ಮತ್ತು ಜ್ಯೋತಿ ಗಮನಸೆಳೆದರು. ಸಾವಿತ್ರಿಬಾಯಿ ಪುಲೆ ತಂಡದವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀದೇವಿ ಮತ್ತು ಕಾವೇರಿ ನಿರೂಪಿಸಿದರು. ರೇಖಾ ಸ್ವಾಗತಿಸಿದರು. ವಿಶ್ವಜ್ಯೋತಿ ವಂದಿಸಿದರು.