ಎನ್.ಇ.ಪಿ. ಶಿಕ್ಷಣ ಪದ್ಧತಿ ಮುಂದುವರಿಸಲು ಆಗ್ರಹ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಅ18: ಎನ್‍ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಯನ್ನು ರದ್ದುಗೊಳಿಸಿ, ಎಸ್‍ಇಪಿ ಯನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿಲುವು ಖಂಡನೀಯವಾಗಿದ್ದು, ಎನ್‍ಇಪಿ ವಿರೋಧದ ನಿಲುವನ್ನು ಕೈಬಿಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‍ಇಪಿ ವಿಷಯವಾಗಿ ಪ್ರಸ್ತುತ ಸರ್ಕಾರಕ್ಕೆ ಹಿಂದಿನ ಸರ್ಕಾರ ರೂಪಿಸಿದ ನಿರ್ಧಾರಗಳಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸುವ ಅವಕಾಶ ಇದೆ, ಅಂತಹ ತಪ್ಪುಗಳನ್ನು ಸರಿಪಡಿಸಲಿ ಆದರೇ ಅದರ ಬದಲಿಗೆ ಶಿಕ್ಷಣ ನೀತಿಯನ್ನೇ ವಿರೋಧಿಸಲು ಹೊರಟಿದ್ದು,ಇದು ರಾಜಕೀಯ ದುರುದ್ದೇಶವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಶಿಕ್ಷಣ ನೀತಿಯನ್ನು ರೂಪಿಸಬೇಕಾದವರು ಶಿಕ್ಷಣ ತಜ್ಞರೇ ಹೊರತು, ರಾಜಕೀಯ ಪಕ್ಷಗಳ ಜೊತೆಗೆ ಗುರುತಿಸಿಕೊಂಡ ಬುದ್ದಿಜೀವಿಗಳಲ್ಲ, ಆದ್ದರಿಂದ ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತ ಸಂಕುಚಿತತೆಗಳಿಗೆ ಒಳಗಾಗದೆ, ಶಿಕ್ಷಣವನ್ನು ರಾಜಕೀಯ ಸ್ವಾರ್ಥಸಾಧನೆಯ ವಸ್ತುವಾಗಿಸದೇ, ಈಗಿನ ಎನ್‍ಇಪಿ ಯನ್ನು ಅದರ ಗುಣಾಧಾರದಲ್ಲಿ ಪರಾಮರ್ಶನ ಮಾಡಬೇಕು. ಎನ್‍ಇಪಿ ಯಲ್ಲಿ ವಾಸ್ತವಿಕವಾಗಿಯೂ ಅಲ್ಪಸ್ವಲ್ಪ ದೋಷಗಳಿದ್ದಲ್ಲಿ ಅವುಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಪಡಿಸಿಕೊಂಡು ಸರ್ಕಾರ ಎನ್‍ಇಪಿ ವಿರೋಧದ ನಿಲುವನ್ನು ಬಿಟ್ಟು ಎನ್‍ಇಪಿ ಶಿಕ್ಷಣ ಪದ್ದತಿಯನ್ನು ಮುಂದುವರೆಸಬೇಕು ಎಂದವರು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅರುಣ್ ಅಮರಗೋಳ, ಶಿವಾನಿ ಶೆಟ್ಟಿ ಉಪಸ್ಥಿತರಿದ್ದರು.