
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.23: ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020ರ ಅನುಗುಣವಾಗಿ ಮಾದರಿ ಶಾಲೆಯಾಗಿ ಆಯ್ಕೆ ಆದ ನಿಮಿತ್ತ ಜಿಲ್ಲಾಡಳಿತದ ಅಧಿಕಾರಿ ಪಿ.ಎಸ್. ಮಂಜುನಾಥ್ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ಮಾಡಿ, ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿ ಅವರೊಂದಿಗೆ ಚರ್ಚಿಸಿ, ಸಲಹೆ ಸೂಚನೆ ನೀಡಿದರು.
ಶಾಲೆಯ ಹಳೇ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಆದ್ದರಿಂದ ಇವುಗಳನ್ನು ನೆಲಸಮಗೊಳಿಸಿ ಜಿ ಪ್ಲಸ್ ಒನ್ ಮಾದರಿಯಲ್ಲಿ ಸುಮಾರು ಹದಿನಾಲ್ಕು ಕೊಠಡಿಗಳನ್ನು ಡಿ.ಎಂ.ಎಫ್. ಹಣದಲ್ಲಿ ಹೊಸದಾಗಿ ನಿರ್ಮಿಸಿ ಕೊಡಲಾಗುವುದು. ಅಲ್ಲಿಯ ತನಕ ಮಕ್ಕಳ ಕಲಿಕೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪರಿಹಾರ ಕ್ರಮಗಳನ್ನು ಶಾಲೆಯ ಎಸ್. ಡಿ. ಎಂ.ಸಿ.ಅಧ್ಯಕ್ಷ ಹಾಗೂ ಸದಸ್ಯರುಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಬೇಕು ಎಂದರು.
ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರೆಹಮಾನ್, ಹಲಕುಂದಿ ಕ್ಲಸ್ಟರ್ ಸಿ.ಆರ್. ಪಿ.ಗಳಾದ ಶ್ರೀನಿವಾಸ ಹಾಗೂ ಅಭಿಯಂತರರು ಉಪಸ್ಥಿತರಿದ್ದರು.