ಎನ್‍ಜಿಓಗಳ ಪ್ರತಿನಿಧಿಗಳೊಂದಿಗೆ ಸಭೆ: ಸಹಕಾರಕ್ಕೆ ಡಿ.ಸಿ ಮನವಿ

ಬೀದರ: ಎ.22:ಕೋವಿಡ್-19 ನಿಗ್ರಹದ ಕ್ರಮಕ್ಕೆ ಸಮುದಾಯದ ಸಹಕಾರವನ್ನು ಕೂಡ ಪಡೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಏಪ್ರಿಲ್ 21ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಎನ್‍ಜಿಓಗಳ ಪದಾಧಿಕಾರಿಗಳನ್ನು ಆಹ್ವಾನಿಸಿ ಅವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಹಲವಾರು ವಿಷಯಗಳನ್ನು ಚರ್ಚಿಸಿದರು.
ವಿವಿಧ ಸಂಘ-ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಕೋವಿಡ್ ರೋಗಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು, ಅವರ ಯೋಗಕ್ಷೇಮ ಕೇಳುವ ಕಾರ್ಯವಾಗಬೇಕಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಬೀದರ ಜಿಲ್ಲೆಯ ಎಲ್ಲ ಸರ್ಕಾರೇತರ ಸಂಘ ಸಂಸ್ಥೆಗಳು ಸ್ವಯಂ ಸ್ಫೂರ್ತಿಯಿಂದ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೆಲ್ಪಡೆಸ್ಕ್ ಆರಂಭಿಸಲಾಗುತ್ತಿದೆ. ತಾವುಗಳು ಕೂಡ ಇದರಲ್ಲಿ ಭಾಗಿಯಾಗಿ ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ವಾರದ ಕೊನೆಯಲ್ಲಿ ಕಫ್ರ್ಯು ಜಾರಿ ಇರುವ ಕಾರಣ ಜನರು ಗುಂಪು ಸೇರದಂತೆ ನಿಯಮ ಪಾಲನೆ ಮಾಡಲು ಎಲ್ಲಾ ಮದುವೆ ಮಂಟಪಗಳ ಮಾಲೀಕರಿಗೆ ತಿಳಿಸಿ ಸಹಕರಿಸಬೇಕು. ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರಲ್ಲಿ ಅನವಶ್ಯಕ ಭಯಭೀತಿ ಮೂಡಿಸುತ್ತಾರೆ. ಅಂತಹವರ ಮೇಲೆ ನಿಗಾ ಇಟ್ಟು ಅವರ ಮೇಲೆ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ಕೋವಿಡ್ ಪಾಜೀಟಿವ್ ವರದಿಯಾದ ಪ್ರತಿಯೊಬ್ಬರೂ ಬ್ರಿಮ್ಸ್‍ಗೆ ಬರುವ ಅಗತ್ಯವಿಲ್ಲ. ಆಯಾ ತಾಲೂಕಿನಲ್ಲಿರುವ ತಾಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಎನ್‍ಜಿಓಗಳಿಗೆ ತಿಳಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಶಾಹೀನ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಖದೀರ್, ವಿವಿಧ ಎನ್‍ಜಿಓಗಳ ಪ್ರತಿನಿಧಿಗಳಾದ ಮಹೇಶ ಗೋರನಾಳಕರ, ವಿನಯ್ ಮಾಳಗೆ ಹಾಗೂ ಇತರರು ಇದ್ದರು.