ಎನ್‌ಡಿಎ ಬೆಂಬಲಿಸಿ ಪ್ರಧಾನಿ ಮೋದಿ ಮನವಿ


ಮದುರೈ,ಏ.೨- ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (ಎನ್‌ಡಿಎ) ಕೂಟಕ್ಕೆ ಮತ ಹಾಕಿದರೆ ಈ ಪ್ರಾಂತ್ಯದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಒಕ್ಕೂಟಕ್ಕೆ ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಸಂಬಂಧ ಮದುರೈನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪಿಸಲು ಸೂಕ್ತ ವಾತಾವರಣ ಕಲ್ಪಿಸುತ್ತೇವೆ. ಅದರಲ್ಲೂ ರೈತರಿಗೆ ಸಹಾಯವಾಗುವ ಮತ್ತು ಅವರ ಆದಾಯವನ್ನು ಹೆಚ್ಚಿಸುವ ಆಗ್ರೊ ಕೈಗಾರಿಕೆಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಈ ಬಾರಿಯ ಮುಂಗಡಪತ್ರದಲ್ಲಿ ಸರಣಿ ಆರ್ಥಿಕ ಕಾರಿಡಾರ್‌ಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಮದುರೈ-ಕೊಲ್ಲಂ ಕಾರಿಡಾರ್ ಕೂಡ ಒಂದಾಗಿದೆ. ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಇದು ೨೦೦೯ಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಡಪತ್ರದಲ್ಲಿ ದಾಖಲೆಯ ಶೇ. ೨೩೮ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
೨೦೨೪ರ ವೇಳೆಗೆ ದೇಶದಲ್ಲಿ ಪ್ರತಿಯೊಂದು ಮನೆಗಳಿಗೆ ಜಲಜೀವನ ಅಭಿಯಾನದಡಿ ನಲ್ಲಿ ನೀರನ್ನು ಪೂರೈಸುವ ಗುರಿ ಹೊಂದಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಬಂದನಂತರ ತಮಿಳುನಾಡಿನಲ್ಲಿ ೧೬ ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ
ಕಲ್ಪಿಸಲಾಗಿದೆ ಎಂದು ಹೇಳಿದರು. ಈ ಭಾಗದ ಜನರು ಹೃದಯ ವೈಶಾಲ್ಯದ ಜತೆಗೆ ಅತ್ಯಂತ ಬುದ್ಧಿವಂತರಾಗಿದ್ದಾರೆ. ಹಲವು ವರ್ಷಗಳ ನಂತರ ತಮ್ಮ ತವರು ರಾಜ್ಯವಾದ ಗುಜರಾತ್‌ನ ಸೌರಾಷ್ಟ್ರದಿಂದ ಅನೇಕ ಜನರು ಇಲ್ಲಿಗೆ ಬಂದಿದ್ದಾರೆ. ಹೀಗಾಗಿ ಮದುರೈ “ಏಕ ಭಾರತ ಶ್ರೇಷ್ಠ ಭಾರತ”ಎಂಬ ಉದಾಹರಣೆಗೆ ಪೂರಕವಾಗಿದೆ ಎಂದು ಹೇಳಿದರು.
ಏ. ೬ರಂದು ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ ೨ ರಂದು ಮತ ಎಣಿಕೆ ನಡೆಯಲಿದೆ.