ಎನ್‌ಆರ್‌ಬಿ ನಾಲೆಗೆ ಹೆಚ್ಚುವರಿ ನೀರು

ದೇವದುರ್ಗ.ಏ.೦೧-ಬೇಸಿಗೆ ಬೆಳೆ ಉಳಿಸಿಕೊಳ್ಳಲು ನಾರಾಯಣಪುರ ಬಲದಂಡೆ ನಾಲೆಗೆ ಏ.೧೦ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಅಲ್ಪಮಟ್ಟಿನ ಜಯಸಿಕ್ಕಿದೆ. ಆದರೆ, ಹತ್ತು ದಿನ ಬದಲು ಕೇವಲ ನಾಲ್ಕು ದಿನ ಹೆಚ್ಚುವರಿಯಾಗಿ ೩.೯ ಟಿಎಂಸಿ ಅಡಿ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಬೇಸಿಗೆ ನೀರು ನಂಬಿಕೊಂಡು ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ಸುಮಾರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆಯಾಗಿದೆ. ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ, ಹೈಬ್ರಿಡ್ ಜೋಳ ಬಿತ್ತನೆಯಾಗಿದೆ. ಈ ಬೆಳೆಗಳು ಸದ್ಯ ಸಮೃದ್ಧವಾಗಿ ಬೆಳೆದಿದ್ದು, ಕಾಳುಕಟ್ಟುವ ಹಂತದಲ್ಲಿವೆ. ಬೆಳೆಗಳಿಗೆ ಏ.೧೦ರವರೆಗೆ ನೀರು ಅಗತ್ಯವಿದೆ ಎನ್ನುವುದು ರೈತರ ವಾದ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ರೈತರ ಹೋರಾಟಗೆ ಸ್ಪಂದಿಸಿದರೂ ಪೂರ್ಣ ಪ್ರಮಾಣದಲ್ಲಿ ಬೇಡಿಕೆ ಈಡೇರಿಸಿಲ್ಲ. ಇದು ರೈತರಿಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿಯಾದ ತೀರ್ಮಾನವಾಗಿದೆ.
ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯದ ನೀರಿನ ಮಟ್ಟ ನೋಡಿಕೊಂಡು ಕಳೆದ ಡಿಸೆಂಬರ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಡಿ.೧ರಿಂದ ೨೦೨೧ರ ಮಾರ್ಚ್ ೨೧ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಇದರಲ್ಲಿ ೧೪ದಿನ ಚಾಲು, ೮ದಿನ ಬಂದ್ ವಾರಬಂಧಿ ಪದ್ಧತಿ ಅನುಸರಿಸಲಾಗಿತ್ತು. ಇದರ ಪರಿಣಾಮ ೧೫.೮೯ಟಿಎಂಸಿ ನೀರು ಉಳಿದಿದ್ದು, ಹೆಚ್ಚುವರಿಯಾಗಿ ಮಾ.೨೨ರಿಂದ ೩೧ರವರೆಗೆ ಹತ್ತು ದಿನ ನೀರು ಹರಿಸಲು ಆದೇಶ ಹೊರಡಿಸಿತ್ತು.
ಐಸಿಸಿ ತೀರ್ಮಾನ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ವಿವಿಧ ರೈತ ಸಂಘಟನೆಗಳು ಹಲವು ಸಲ ಪ್ರತಿಭಟನೆ ನಡೆಸಿದ್ದವು. ಕೆಲ ಕಡೆ ರಸ್ತೆ ಸಂಚಾರ ತಡೆ, ಪಾದಯಾತ್ರೆ, ಅನಿರ್ಧಿಷ್ಟ ಧರಣಿ ನಡೆಸಲಾಗಿತ್ತು. ರೈತರ ಮನವಿಗೆ ಸ್ಪಂದಿಸಿದ ಸಲಹಾ ಸಮಿತಿ ಈಗ ಮತ್ತೆ ಹೆಚ್ಚುವರಿಯಾಗಿ ನಾಲ್ಕು ದಿನ ನೀರು ಹರಿಸಲು ತೀರ್ಮಾನಿಸಿದ್ದು ಐಸಿಸಿ ಅಧ್ಯಕ್ಷ, ಡಿಸಿಎಂ ಗೋವಿಂದ ಕಾರಜೋಳ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮಾ.೨೧ರವರೆಗೆ ನೀರು ಹರಿಸಿದ ನಂತರ ಎರಡೂ ಜಲಾಶಯದಲ್ಲಿ ೪೦.೦೪ಟಿಎಂಸಿ ಅಡಿ ನೀರು ಉಳಿದಿದ್ದು, ಕುಡಿವ ನೀರು ಸೇರಿ ಅಗತ್ಯ ಬಳಕೆಗೆ ೨೪.೧೦ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ಉಳಿದ ೧೫.೮೯ಟಿಎಂಸಿ ನೀರಿನಲ್ಲಿ ಮಾ.೨೧ರಿಂದ ೩೧ರವರೆಗೆ ೧೦ದಿನ ಹೆಚ್ಚುವರಿ ೧೨ಟಿಎಂಸಿ ನೀರು ಹರಿಸಲಾಗಿದೆ. ರೈತರ ಒತ್ತಾಯ ಮೇರೆಗೆ ಇದರಲ್ಲಿ ಉಳಿದ ೩.೯೦ಟಿಎಂಸಿ ಅಡಿ ನೀರು ಹೆಚ್ಚುವರಿ ನಾಲ್ಕು ದಿನ ಹರಿಸಲಾಗುವುದು. ನಾರಾಯಣಪುರ ಎಡದಂಡೆ ನಾಲೆಗೆ ಏ.೧ರಿಂದ ೪ರವರೆಗೆ ಹಾಗೂ ಬಲದಂಡೆ ನಾಲೆಗೆ ಏ.೧ರಿಂದ ೫ರವರೆಗೆ ವಾರಬಂಧಿ ಪದ್ಧತಿ ಪ್ರಕಾರ ನೀರು ಬಂದ್ ಮಾಡಿ, ಏ.೬ರಿಂದ ೧೦ರವರೆಗೆ ನೀರು ಹರಿಸಲಾಗುವುದು ಎಂದು ಆದೇಶ ಪ್ರತಿಯಲ್ಲಿ ನೀರಾವರಿ ಸಲಹಾ ಸಮಿತಿ ತಿಳಿಸಿದೆ. ಆದರೆ, ನಡುವೆ ಐದು ದಿನ ವಾರಬಂಧಿ ಜಾರಿಗೊಳಿಸಿದ್ದರಿಂದ ಎಲ್ಲ ರೈತರಿಗೂ ನೀರು ತಲುಪುತ್ತಾ? ಎನ್ನುವ ಪ್ರಶ್ನೆ ಎದ್ದಿದೆ.

ಕೋಟ್======
ಐಸಿಸಿ ಸಲಹಾ ಸಮಿತಿ ಸಲಹೆಯಂತೆ ಹೆಚ್ಚುವರಿ ನಾಲ್ಕು ದಿನ ನೀರು ಹರಿಸಲು ಡಿಸಿಎಂ ಗೋವಿಂದ ಕಾರಜೋಳ ಆದೇಶ ಹೊರಡಸಿದ್ದಾರೆ. ೩.೯೦ಟಿಎಂಸಿ ನೀರಿನಲ್ಲಿ ಎಡದಂಡೆ ನಾಲೆಗೆ ಏ.೧ರಿಂದ ೪ರವರೆಗೆ, ಬಲದಂಡೆ ನಾಲೆಗೆ ಏ.೬ರಿಂದ ೧೦ರವರೆಗೆ ನೀರು ಹರಿಸಲಾಗುವುದು.
| ರಾಮನಗೌಡ ಹಳ್ಳೂರು
ನಾರಾಯಣಪುರ ಜಲಾಶಯ ಎಇಇ