ಎನ್ಸೆಸ್ಸೆಸ್, ರೆಡ್‍ಕ್ರಾಸ್, ಯುಥ್‍ಕ್ಲಬ್ ಸಹಕಾರ ಕೋರಿದ ಜಿಲ್ಲಾಡಳಿತ

ಬೀದರ:ಎ.22: ಕೋವಿಡ್ ತಡೆ ಕಾರ್ಯಾಚರಣೆಗೆ ಜಿಲ್ಲೆಯ ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ಘಟಕಗಳು, ರೆಡ್ ಕ್ರಾಸ್ ಸಂಸ್ಥೆ, ನೆಹರೂ ಯುವಕೇಂದ್ರ ಮತ್ತು ಎಲ್ಲಾ ಯೂತ್‍ಕ್ಲಬ್‍ಗಳ ಮತ್ತು ಇನ್ನೀತರ ಅನೇಕ ಸಂಘ ಸಂಸ್ತೆಗಳ ಸಹಕಾರವನ್ನು ಕೂಡ ಪಡೆದುಕೊಳ್ಳಲು ಜಿಲ್ಲಾಡಳಿತವು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಎನ್‍ಎಸ್‍ಎಸ್ ಸಂಯೋಜಕರು, ಯುಥ್ ಕ್ಲಬ್ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಆಹ್ವಾನಿಸಿ ಅವರೊಂದಿಗೆ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ ಅವರು ಏಪ್ರೀಲ್ 20ರಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಚರ್ಚಿಸಿದರು.
ಇದೆ ಸಂದರ್ಭದಲ್ಲಿ ರುದ್ರೇಶ ಗಾಳಿ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಹೀಗಾಗಿ ತಾವುಗಳು ಹಳ್ಳಿಹಳ್ಳಿಗೆ ಹೋಗಿ ಅಲ್ಲಿ ಪಿಡಿಓ, ಗ್ರಾಪಂ ಕಾರ್ಯದರ್ಶಿಗಳ ಸಹಕಾರ ಪಡೆದು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು.
ತಾವು ಇರುವ ಕಡೆಗಳಲ್ಲಿ ಆಸ್ಪತ್ರೆಗಳಿಗೆ ಸಾರ್ವಜನಿಕರನ್ನು ಕರೆದೊಯ್ದು ಲಸಿಕೆ ಹಾಕಿಸಬೇಕು. ಮಾಸ್ಕ ಧರಿಸಲು, ಅನವಶ್ಯಕವಾಗಿ ಸುತ್ತಾಡದೇ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯಬೇಕು ಎಂದು ಜನರಿಗೆ ತಿಳಿಸಬೇಕು. ಕೋವಿಡ್ ಬಗ್ಗೆ ಜನರಲ್ಲಿರುವ ಅನವಶ್ಯಕ ಭಯವನ್ನು ಹೋಗಲಾಡಿಸಬೇಕು. ಕೋವಿಡ್ ಬಾರದಂತೆ ಬದುಕಿನ ರೀತಿಯನ್ನು ಬದಲಿಸಿಕೊಳ್ಳಲು ತಿಳಿ ಹೇಳಬೇಕು ಎಂದರು.
ರೆಡ್ ಕ್ರಾಸ್ ಸಂಸ್ಥೆ, ನೆಹರೂ ಯುವಕೇಂದ್ರ ಮತ್ತು ಎಲ್ಲಾ ಯೂತ್‍ಕ್ಲಬ್‍ಗಳು, ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ಘಟಕಗಳ ಪದಾಧಿಕಾರಿಗಳಿಗೆ ಐಡಿ ಕಾರ್ಡುಗಳನ್ನು ಕೊಡುತ್ತೇವೆ. ತಾವುಗಳು ಒಂದು ವಾಟ್ಸ್‍ಅಪ್ ಗ್ರೂಪ್ ರಚಿಸಿ ಅಲ್ಲಿ ತಮ್ಮ ಕಾರ್ಯಚಟುವಟಿಕೆಗಳು, ಯೋಜನೆಗಳು ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ನೆಹರೂ ಯುವಕೇಂದ್ರದ ಅಧಿಕಾರಿ ಮಯೂರಕುಮಾರ ಗೋರ್ಮೆ, ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಕ್ಲಬ್‍ನ ಅಧ್ಯಕ್ಷೆ ಮಂಗಳಾ ಮರಕಲೆ, ಶ್ರೀ ವೀರಭದ್ರೇಶ್ವರ ಯುತ್‍ಕ್ಲಬ್‍ನ ಸತೀಶ ಬೀಳಕೋಟೆ, ಭಗತ್ ಸಿಂಗ್ ಯುಥ್ ಕ್ಲಬ್‍ನ ಅಂಬಾದಾಸ್ ಕೋರೆ, ಸುಭಾಷಚಂದ್ರ ಬೋಸ್ ಯುವಕ ಸಂಘ ಔರಾದ್‍ನ ರತ್ನದೀಪ ಕಸ್ತೂರೆ ಹಾಗೂ ಇನ್ನೀತರರು ಇದ್ದರು.