ಎನ್‌ಸಿಪಿ ಘಟಕಗಳ ವಿಸರ್ಜನೆ

ಮುಂಬೈ,ಜು. ೨೧- .ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರು ಶಿವಸೇನೆಯನ್ನು “ವ್ಯವಸ್ಥಿತವಾಗಿ ದುರ್ಬಲಗೊಳಿಸಿದ್ದಾರೆ” ಎಂದು ಶಿವಸೇನೆಯ ಮುಖಂಡ ರಾಮದಾಸ್ ಕದಂ ಆರೋಪಿಸಿದ ಬೆನ್ನಲ್ಲೇ ಎನ್ ಸಿಪಿಯ ಎಲ್ಲಾ ಘಟಕಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ.
ಎನ್‌ಸಿಪಿ ವರಿಷ್ಠರ ನಡೆಯನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ಸಮರ್ಥಿಸಿಕೊಂಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಪಕ್ಷದ ಎಲ್ಲಾ ಘಟಕ ಮತ್ತು ಕೋಶಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
“ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅನುಮೋದನೆಯೊಂದಿಗೆ, ಎಲ್ಲಾ ಘಟಕಗಳು ಮತ್ತು ಕೋಶಗಳು ತಕ್ಷಣವೇ ಜಾರಿಗೆ ಬರುವಂತೆ ವಿಸರ್ಜನೆಯಾಗಿವೆ” ಎಂದು ಪ್ರಫುಲ್ ಪಟೇಲ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ಮೂರು ವಾರಗಳ ನಂತರ ಹಠಾತ್ ನಡೆಗೆ ಮಾಜಿ ಕೇಂದ್ರ ಸಚಿವ ಪಟೇಲ್ ಕಾರಣ ಬಹಿರಂಗಪಡಿಸಲಿಲ್ಲ.

ಉದ್ಧವ್ ಠಾಕ್ರೆ ನೇತೃತ್ವದ ಕೇಸರಿ ಪಕ್ಷದ ಕೆಲ ಶಾಸಕರ ಬಂಡಾಯದ ನಂತರ ಜೂನ್ ಅಂತ್ಯದಲ್ಲಿ ಶಿವಸೇನಾ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಶರದ್ ಪವಾರ್ ಅವರು ಶಿವಸೇನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಯತ್ನಿಸಿದ್ದರು. ಕೆಲವು ಶಾಸಕರು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಆದರೂ ಉದ್ದವ್ ಠಾಕ್ರೆ ಅವರು ಶರದ್ ಪವಾರ್ ಅವರೊಂದಿಗೆ ಬೇರೆಯಾಗಲು ಸಿದ್ಧರಿಲ್ಲ ಎಂದು ರಾಮದಾಸ್ ಕದಮ್ ಹೇಳಿದ್ದಾರೆ.
ಠಾಕ್ರೆ ಸರ್ಕಾರದ ಮೊದಲ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದುರಾಗಿದ್ದಕ್ಕೆ ಕೃತಜ್ಞರಾಗಿರಬೇಕು. ಇಲ್ಲದಿದ್ದರೆ, ಐದು ವರ್ಷಗಳ ಅಧಿಕಾರಾವಧಿಯಲ್ಲಿ ಶಿವಸೇನೆ ಅಸ್ಥಿತ್ವವೇ ಇರುತ್ತಿರಲಿಲ್ಲ.. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೫-೧೦ ಶಾಸಕರೂ ಗೆಲ್ಲುತ್ತಿರಲಿಲ್ಲ,” ಎಂದರು.
ಶಿವಸೇನೆಯ ರಾಮದಾಸ್ ಕದಮ್ ಅವರ ಆರೋಪಗಳನ್ನುಎನ್‌ಸಿಪಿಯ ಮುಖ್ಯ ವಕ್ತಾರ ಮಹೇಶ್ ತಾಪಸೆ ತಳ್ಳಿಹಾಕಿದ್ದಾರೆ., ಶಿವಸೇನೆಯಲ್ಲಿನ ವಿಭಜನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಮತ್ತು ಬಂಡಾಯ ನಾಯಕರು ಶರದ್ ಪವಾರ್ ಅವರನ್ನು ಗುರಿಯಾಗಿಸಿಕೊಂಡುಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.