ಎನ್‍ಪಿಎಸ್ ಹೋಗಲಾಡಿಸಿ ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪನೆಗೆ ಒತ್ತಾಯ

ವಿಜಯಪುರ:ನ.4: ನೌಕರರ ಹಿತರಕ್ಷಣೆಗೆ ಮಾರಕವಾಗಿರುವ ಎನ್‍ಪಿಎಸ್ ಯೋಜನೆ ಹೋಗಲಾಡಿಸಿ ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಎಲ್ಲ ರೀತಿಯ ಹೋರಾಟ, ಅಭಿಯಾನಕ್ಕೆ ಪ್ರೌಢಶಾಲಾ ಸಹ ಶಿಕ್ಷಕರ ಬೆಂಬಲ ಅತ್ಯಂತ ಅವಶ್ಯಕವಾಗಿದ್ದು, ಈ ಕಾರ್ಯಕ್ಕೆ ಕೈ ಜೋಡಿಸಿ ಎಂದು ವಿಜಯಪುರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಬಿರಾದಾರ ಕೋರಿದರು.
ತಿಕೋಟಾ ತಾಲೂಕಿನ ಹುಬನೂರ, ಕಳ್ಳಕವಟಗಿ, ಘೊಣಸಗಿ, ಟಕ್ಕಳಕಿ ಸೇರಿದಂತೆ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪ್ರೌಢಶಾಲಾ ಶಿಕ್ಷಕರ ಜೊತೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು. ನೂತನ ಪಿಂಚಣಿ ಯೋಜನೆ ರದ್ದಾಗಬೇಕಿದೆ, ನೌಕರರ ನಿವೃತ್ತ ಜೀವನವನ್ನು ರಕ್ಷಿಸುವ ಹಾಗೂ ಭದ್ರತೆ ಒದಗಿಸುವ ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪನೆಯಾಗಬೇಕಿದೆ, ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಸಾತ್ವಿಕ ಒತ್ತಡ ಹೇರುವ ಕಾರ್ಯ ನಿರಂತರವಾಗಿ ನಡೆಯಲಿದೆ, ಈ ವಿಷಯದ ಕುರಿತು ಸರ್ಕಾರದ ಗಮನ ಸೆಳೆಯಲು ಪತ್ರ ಚಳವಳಿ, ಪಾದಯಾತ್ರೆ ಸೇರಿದಂತೆ ಹಲವಾರು ಹೋರಾಟಗಳನ್ನು ಕೈಗೊಳ್ಳಲಾಗುತ್ತಿದೆ, ಜಿಲ್ಲೆಯ ಎಲ್ಲ ಪ್ರೌಢಶಾಲಾ ಸಹ ಶಿಕ್ಷಕರು ಈ ಹೋರಾಟಕ್ಕೆ ತಮ್ಮ ಬೆಂಬಲ ನೀಡಬೇಕು ಎಂದರು.
ಸಮಸ್ತ ಪ್ರೌಢಶಾಲಾ ಶಿಕ್ಷಕರು ಆಶೀರ್ವಾದದ ರೂಪದಲ್ಲಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕರುಣಿಸಿದ್ದಿರಿ, ಈ ಜವಾಬ್ದಾರಿಯ ಭಾಗವಾಗಿ ಈ ಹೋರಾಟವೂ ಒಂದು ಭಾಗವಾಗಿರಲಿದೆ, ಕೇಂದ್ರ ಮಾದರಿಯ ವೇತನದಲ್ಲಿ ಪ್ರೌಢಶಾಲಾ ಶಿಕ್ಷಕರ ವೇತನವನ್ನು ಹೆಚ್ಚಳಕ್ಕೆ ಹೋರಾಟ, ಸ್ಥಗಿತಗೊಂಡಿರುವ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಹುದ್ದೆಗೆ ಪ್ರೌಢಶಾಲಾ ಸಹ ಶಿಕ್ಷಕರಿಂದ ಬಡ್ತಿಯನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಎಲ್ಲ ಪದಾಧಿಕಾರಿಗಳ, ಹಿರಿಯ ಶಿಕ್ಷಕರ ಸಹಕಾರ, ಸಲಹೆ ಹಾಗೂ ಮಾರ್ಗದದರ್ಶನ ಪಡೆದುಕೊಂಡು ನಿರಂತರ ಹೋರಾಟ ನಡೆಸಲಾಗುವುದು ಎಂದರು.
ಶಿಕ್ಷಕ ಬಿ.ಬಿ. ಕೋಟ್ಯಾಳ ಮಾತನಾಡಿದರು. ಸುಭಾಸ ಬೂದಿಹಾಳ, ವಿಜಯೇಂದ್ರ ಪುರೋಹಿತ, ಸುರೇಶ ದೇವೂರು, ವೈ.ವೈ. ರೂಗಿ, ರಮೇಶ್ ಖ್ಯಾಡಿ, ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಿಂಗನಗೌಡ ಬಿರಾದಾರ, ಬಿ.ಎನ್ ಹಿರೇಮಠ, ಜಿ.ಬಿ.ಗಳವೆ ಮೊದಲಾದವರು ಉಪಸ್ಥಿತರಿದ್ದರು.