ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬಿಜೆಡಿ ಬೆಂಬಲ

ನವದೆಹಲಿ,ಜೂ.೨೨- ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬೆಂಬಲಕ್ಕೆ ಒಡಿಶಾದ ಬಿಜೆಡಿ ಕೈಜೋಡಿಸಿದ್ದು ಮುರ್ಮು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜೊತೆ ಇರುವಂತೆ ತನ್ನ ಶಾಸಕರು, ಸಂಸದರಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೂಚಿಸಿದ್ದಾರೆ.

ಒರಿಸ್ಸಾ ಮೂಲದ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರು ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸುವಂತೆ ಸೂಚಿಸಿದ್ದಾರೆ.

ಈ ನಡುವೆ ಬಿಹಾರದ ದಲಿತ ನಾಯಕರಾದ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ ಜೆಪಿ, ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಜಿ ಅವರೂ ಬೆಂಬಲ ನೀಡುವ ಸಾದ್ಯತೆ ಇದೆ.

ಎನ್ ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಲ್ಲಿ ಒಂದಾದ ಜೆಡಿಯು ಬೆಂಬಲ ಸಿಕ್ಕಿದೆ.ಹೀಗಾಗಿ ದ್ರೌಪದಿ ಮುರ್ಮು ಆಯ್ಕೆ ಮತ್ತಷ್ಟು ಸುಲಭವಾಗಲಿದೆ.

ಪೋಪ್‌ರನ್ನು ಭೇಟಿಗೆ ವ್ಯಾಟಿಕನ್‌ಗೆ ಭೇಟಿ ನೀಡುತ್ತಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಅವರು ದ್ರೌಪದಿ ಮುರ್ಮು ಅವರಿಗೆ ಮತ ಹಾಕುವಂತೆ ರಾಜ್ಯದ ಎಲ್ಲಾ ಚುನಾಯಿತ ಶಾಸಕರಿಗೆ ಮನವಿ ಮಾಡಿದ್ದಾರೆ.

ಮುರ್ಮು ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಪಕ್ಷ ಉಪಸ್ಥಿತರಿರುವ ಸಾಧ್ಯತೆಯಿದೆ ಎಂದು ಬಿಜೆಡಿ ಮೂಲಗಳು ತಿಳಿಸಿವೆ,

ಜೆಡಿಯು ಬೆಂಬಲ ಕೇಳಿದ ಪ್ರಧಾನಿ

ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ತಮ್ಮ ಬೆಂಬಲ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿ ಬೆಂಬಲ ಕೇಳಿದ್ದಾರೆ.

ಒಡಿಶಾದಲ್ಲಿ ಮತ್ತು ಜಾರ್ಖಂಡ್‌ನಲ್ಲಿ ರಾಜ್ಯಪಾಲರಾಗಿ , ಸಚಿವರಾಗಿ ಸಾಮರ್ಥ್ಯವನ್ನು ಸಾಬೀತುಪಡಿಸಿದ ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿಗೆ ಅವರಿಗೆ ಇದೇ ವೇಳೆ ನಿತೀಶ್ ಕುಮಾರ್ ಅವರು ಹೃತ್ಪೂರ್ವಕ ಧನ್ಯವಾದ” ತಿಳಿಸಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದಾರೆ.

ಜೆಡಿಯು ಮೂರು ರಾಜ್ಯಗಳಲ್ಲಿ ೨೧ ಸಂಸದರು ಮತ್ತು ೫ ಶಾಸಕರನ್ನು ಹೊಂದಿದೆ- ಬಿಹಾರ, ಅರುಣಾಚಲ ಪ್ರದೇಶ ಮತ್ತು ಮಣಿಪುರ. ಲೋಕಸಭೆಯಲ್ಲಿ ೧೬ ಸದಸ್ಯರನ್ನು ಹೊಂದಿರುವ ಜೆಡಿಯು ಕೇಂದ್ರದಲ್ಲಿ ಎನ್‌ಡಿಎಯ ಅತಿದೊಡ್ಡ ಮಿತ್ರ ಪಕ್ಷವಾಗಿದೆ.