ಎನ್‍ಟಿಎಂ ಶಾಲೆ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜು.27:- ಎನ್ ಟಿ ಎಂ ಶಾಲೆ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಮಹಾರಾಣಿ (ಎನ್ ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.
ಎನ್ ಟಿ ಎಂ ಶಾಲೆಯಿದ್ದ ಆವರಣದ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರಾಮಕೃಷ್ಣ ಆಶ್ರಮ ಮಾತಿನಂತೆ ನಡೆದುಕೊಳ್ಳಲಿ. ಸ್ಮಾರಕದ ಜೊತೆ ಶಾಲೆಯು ನಿರ್ಮಾಣವಾಗಲಿ. ಇದಕ್ಕಾಗಿ ಆಗ್ರಹಿಸಿ ಒಕ್ಕೂಟದಿಂದ ಮತ್ತೆ ಹೋರಾಟ ಪ್ರಾರಂಭ ಮಾಡಲಿದ್ದೇವೆ ಎಂದರು. ಶತಮಾನದ ಹಳೆಯದಾದ ಮಹಾರಾಣಿ ಮಾದರಿ ಶಾಲೆಯನ್ನು ಈಗಾಗಲೇ ಕೆಡವಿ ಹಾಕಿರುವ ರಾಮಕೃಷ್ಣ ಆಶ್ರಮದವರು ಅದಕ್ಕೂ ಮುಂಚೆ ಮಾಡಿಕೊಂಡ ಮೌಖಿಕ ಒಪ್ಪಂದದಂತೆ ಸ್ಮಾರಕದ ಜಾಗದಲ್ಲಿ ಶಾಲೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಸುಮಾರು 9ವರ್ಷಗಳಿಂದ ಶಾಲೆ ಉಳಿಸಿ ಹೋರಾಟ ನಡೆಯುತ್ತಿದ್ದು ನ್ಯಾಯಾಲಯಗಳಲ್ಲಿ ತೀರ್ಪು ಬಂದಿದ್ದರೂ ಶಾಲೆ ಶಾಲೆಯಿದ್ದ ಜಾಗವನ್ನು ಅರ್ಧದಷ್ಟು ಉಳಿಸಿ ಹೊಸದಾಗಿ ಭವ್ಯ ಕಟ್ಟಡ ನಿರ್ಮಿಸುವುದಾಗಿ ರಾಮಕೃಷ್ಣ ಆಶ್ರಮದವರು ರಾಜೀ ಸಂಧಾನದ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಸರ್ಕಾರದಿಂದ ಶತಮಾನದಷ್ಟು ಹಳೆಯದಾದ ಶಾಲೆಯನ್ನು ಎದುರುಗಡೆಯ ಆವರಣಕ್ಕೆ ಸ್ಥಳಾಂತರಿಸಲು ಆದೇಶ ಮಾಡಿಸಿಕೊಂಡು ಬಂದ ಆಶ್ರಮದವರು ರಾಜೀ ಸಂಧಾನದ ಭರವಸೆ ಕೊಟ್ಟಂತೆ ಶಾಲೆಯನ್ನು ನಿರ್ಮಿಸುವ ಪ್ರಸ್ತಾಪದಿಂದ ಹಿಂದೆ ಸರಿದಿದ್ದಾರೆ. ರಾಮಕೃಷ್ಣ ಆಶ್ರಮದವರು ಮಾತಿಗೆ ತಪ್ಪದಂತೆ ಅಲ್ಲಿ ಭವ್ಯವಾಗಿ ಶಾಲೆಯಿದ್ದ ಅರ್ಧ ಜಾಗದಲ್ಲಿ ಹೊಸ ಶಾಲೆಯನ್ನು ನಿರ್ಮಿಸಿಕೊಡುವ ಬಗ್ಗೆ ಪ್ರಕಟಿಸಲಿ ಎಂದು ಒತ್ತಾಯಿಸಿ ನಾವು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಎನ್ ಟಿ ಎಂ ಶಾಲೆ ಹೋರಾಟಗಾರರಾದ ಪ.ಮಲ್ಲೇಶ್, ಪಿ.ಮರಂಕಯ್ಯ, ಸುರೇಸ್ ಬಾಬು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.