ಎನ್ಐಟಿಕೆ ಟೋಲ್ ಗೇಟ್ ಬಳಿ ಖುಲ್ಲಂಖುಲ್ಲಾ ವೇಶ್ಯಾವಾಟಿಕೆ, ಪೊಲೀಸರ ಮೌನ!

ಸುರತ್ಕಲ್, ಡಿ.೨೩- ಎನ್ಐಟಿಕೆ ಟೋಲ್ ಗೇಟ್ ನಿಂದ ಪಾವಂಜೆ ಬ್ರಿಡ್ಜ್ ತನಕ ಮಂಗಳಮುಖಿಯರ ವೇಶ್ಯಾವಾಟಿಕೆ ದಂಧೆ ಖುಲ್ಲಂಖುಲ್ಲಾ ಆಗಿ ನಡೀತಿದ್ರು ಸುರತ್ಕಲ್ ಪೊಲೀಸರು ಮೌನಕ್ಕೆ ಶರಣಾಗಿರುವ ಆರೋಪ ಕೇಳಿಬಂದಿದೆ. ಎನ್ ಐಟಿಕೆ ಕಾಲೇಜ್ ಕ್ಯಾಂಪಸ್ ಸಮೀಪ ರಾ. ಹೆದ್ದಾರಿ, ಟೋಲ್ ಗೇಟ್ ಪರಿಸರ, ಪಾವಂಜೆ ಬ್ರಿಡ್ಜ್ ಎಲ್ಲೆಂದರಲ್ಲಿ ಸಂಜೆಯಾಗುತ್ತಲೇ ಮಂಗಳಮುಖಿಯರು ಪಕ್ಕದ ಗದ್ದೆ, ತೆಂಗಿನ ತೋಟ, ಹುಲ್ಲುಹಾಸಿನ ಮಧ್ಯೆ ವಿಟಪುರುಷರನ್ನು ಕರೆದೊಯ್ದು ದಂಧೆ ನಡೆಸುತ್ತಿದ್ದಾರೆ. 500,1000 ರೂ. ಎಂದು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೈ ತೋರಿಸುವ ಇವರ ಬಲೆಗೆ ಪ್ರತಿರಾತ್ರಿ ಹತ್ತಾರು ಮಂದಿ ಬೀಳುತ್ತಾರೆ.ಮಧ್ಯರಾತ್ರಿ 12 ಗಂಟೆ ದಾಟಿದರೂ ಟೋಲ್ ಗೇಟ್, ಪಾವಂಜೆ ಬ್ರಿಡ್ಜ್ ಬಳಿ ಬೈಕ್, ಸ್ಕೂಟರ್, ರಿಕ್ಷಾ, ಲಾರಿ, ಕ್ಯಾಬ್ ಕಾರುಗಳು ಸಾಲು ನಿಲ್ಲುತ್ತಿವೆ. ಪೊಲೀಸ್ ವಾಹನ ಇಲ್ಲಿ ಹತ್ತಾರು ಬಾರಿ ಓಡಾಡಿದರೂ ಇದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಅನ್ನೋದು ಸ್ಥಳೀಯರ ದೂರು. ಪಾವಂಜೆ ಬ್ರಿಡ್ಜ್ ಬಳಿ ಜನವಸತಿ ಪ್ರದೇಶವಿದ್ದು ಇಲ್ಲಿ ಅನೈತಿಕ ವ್ಯವಹಾರದಿಂದ ಸ್ಥಳೀಯರು ಮುಜುಗರ ಪಟ್ಟುಕೊಳ್ಳುವಂತಾಗಿದೆ.

ಗೂಡಂಗಡಿಗಳ ಸಹಕಾರ!

ಎನ್ ಐಟಿಕೆ ಟೋಲ್ ಗೇಟ್, ಮುಕ್ಕ ಬಳಿಯೂ ಇದೇ ರೀತಿ ಮಂಗಳಮುಖಿಯರ ದಂಧೆ ನಡೆಯುತ್ತಿದ್ದು ಇಲ್ಲಿ ತಡರಾತ್ರಿ ತೆರೆದಿರುವ ಕೆಲವು ಗೂಡಂಗಡಿಗಳು ಇವರಿಗೆ ನೆರವು ನೀಡುತ್ತಿರುವ ಆರೋಪ ಕೂಡಾ ಕೇಳಿಬರುತ್ತಿದೆ. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅನೈತಿಕ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮೌನಕ್ಕೆ ಶರಣಾಗಿದೆ. ಟೋಲ್ ಗೇಟ್ ನಿಂದ ಪಾವಂಜೆ, ಕೊಲ್ನಾಡ್ ತನಕ ದಂಧೆ ವಿಸ್ತರಿಸಿರುವ ಮಂಗಳಮುಖಿಯರನ್ನು ನಿಯಂತಿಸುವವರಾರು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.