ಎನ್‍ಎಸ್‍ಎಸ್‍ಕೆ: ವಿಜಯದಶಮಿಗೆ ಎಥೆನಾಲ್ ಘಟಕಕ್ಕೆ ಶಂಕುಸ್ಥಾಪನೆ:ಡಿ.ಕೆ. ಸಿದ್ರಾಮ

ಬೀದರ್:ಸೆ.26: ವಿಜಯದಶಮಿಗೆ ನಾರಾಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ 60 ಕೆಎಲ್‍ಪಿಡಿ ಎಥೆನಾಲ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು.
ತಾಲೂಕಿನ ಜನವಾಡ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ(ಸೆ.25) ಜರುಗಿದ 38ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಘಟಕಕ್ಕೆ ಕರ್ನಾಟಕ ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್‍ನಿಂದ ಸಾಲ ಮಂಜೂರಾಗಿದೆ. ಯಂತ್ರೋಪಕರಣ ಖರೀದಿ ಅಂತಿಮಗೊಳಿಸಲಾಗಿದೆ. ಒಂದು ವರ್ಷದೊಳಗೆ ಘಟಕ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಘಟಕ ಆರಂಭದಿಂದ ರೈತರ ಕಬ್ಬಿಗೆ ಹೆಚ್ಚಿನ ಬೆಲೆ ಕೊಡಲು ಸಾಧ್ಯವಾಗಲಿದೆ. ವರ್ಷಕ್ಕೆ ಕಾರ್ಖಾನೆ ಮೇಲಿನ ರೂ. 30 ರಿಂದ 35 ಕೋಟಿಯಷ್ಟು ಸಾಲ ತೀರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಪÀ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ನವೆಂಬರ್ ಮೊದಲ ವಾರದಲ್ಲಿ ಆರಂಭಿಸಲಾಗುವುದು. ಈ ವರ್ಷ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಬ್ಬು ಕಟಾವು, ಸಾಗಾಣಿಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
2022-23ನೇ ಸಾಲಿನಲ್ಲಿ 3.59 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, ಶೇ 9.40 ರಿಕವರಿಯೊಂದಿಗೆ 3.42 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಸಕ್ಕರೆ ಮಾರಾಟದಿಂದ ಕಾರ್ಖಾನೆಗೆ ರೂ. 119.28 ಕೋಟಿ ಆದಾಯ ಬಂದಿದೆ ಹೇಳಿದರು.
ಕಳೆದ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಸದಸ್ಯ ರೈತರಿಗೆ ಪ್ರತಿ ಟನ್‍ಗೆ 1 ಕೆ.ಜಿ. ಉಚಿತ ಸಕ್ಕರೆ ನವೆಂಬರ್ 10 ರೊಳಗೆ ಕೊಡಲಾಗುವುದು. ಅನುತ್ಪಾದಕ ಸದಸ್ಯರಿಗೆ ತಲಾ 5 ಕೆ.ಜಿ. ಸಕ್ಕರೆ ವಿತರಿಸಲಾಗುವುದು ಎಂದು ತಿಳಿಸಿದರು.
ನನ್ನನ್ನು ಗಲ್ಲಿಗೇರಿಸಿ. ರಾಜೀನಾಮೆ ಪಡೆದುಕೊಳ್ಳಿ. ಕಾರ್ಖಾನೆ ಕೆಡಿಸುವ ಕೆಲಸ ಮಾಡಬೇಡಿ ಎಂದು ತಮ್ಮ ರಾಜಕೀಯ ಎದುರಾಳಿಗಳಿಗೆ ಹೇಳಿದರು.
ಕಾರ್ಖಾನೆ ಮುಚ್ಚಿದರೆ ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ಮುಚ್ಚದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಕಾರ್ಖಾನೆಯ ಒಟ್ಟು ಆಸ್ತಿ ಮೌಲ್ಯ ರೂ. 800 ಕೋಟಿ ಇದೆ. ರೂ. 669 ಕೋಟಿ ಸಾಲ ಪಡೆಯಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು, ರೂ. 78 ಕೋಟಿ ಮೌಲ್ಯದ ಸಕ್ಕರೆ ಮಾರಾಟ ಮಾಡಿ, ರೈತರ ಬಿಲ್ ಪಾವತಿಸಲಾಗಿದೆ. ಇದರಲ್ಲಿ ಯಾವುದೇ ಹೇರಾಫೇರಿ ನಡೆದಿಲ್ಲ ಎಂದು ತಿಳಿಸಿದರು.
ಕಾರ್ಖಾನೆಯ ಉಪಾಧ್ಯಕ್ಷ ಬಾಲಾಜಿ ಚವಾಣ್, ಕಾರ್ಖಾನೆಯ ನಿರ್ದೇಶಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಕಾರ್ಖಾನೆ ನಿರ್ದೇಶಕರಾದ ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ, ಶಶಿಕುಮಾರ ಪಾಟೀಲ ಸಂಗಮ, ಶಿವಬಸಪ್ಪ ಚನ್ನಮಲ್ಲೆ, ಸಿದ್ರಾಮ ವಾಘಮಾರೆ, ವಿಜಯಕುಮಾರ ಪಿ. ಪಾಟೀಲ, ಮಲ್ಲಮ್ಮ ಪಾಟೀಲ, ಶೋಭಾವತಿ ಪಾಟೀಲ, ಸೀತಾರಾಮ ರಾಠೋಡ್, ಝರೆಪ್ಪ ಮಮದಾಪುರೆ, ವೀರಶೆಟ್ಟಿ ಪಟ್ನೆ, ನಾಗರೆಡ್ಡಿ ಯಾಚೆ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಪರಂಜಿ ಉಪಸ್ಥಿತರಿದ್ದರು.