ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಮುಂದೆ ಪರ ವಿರೋಧ ಪ್ರತಿಭಟನೆ

ಆಳಂದ: ನ.10:ತಾಲೂಕಿನ ಭೂಸನೂರ ಹತ್ತಿರದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಮುಂದೆ ರೈತರ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಬೆಂಬಲಿಸಿರುವ ಶಾಸಕ ಸುಭಾಷ ಗುತ್ತೇದಾರ ಅವರು ಕಬ್ಬಿಗೆ ಬೆಲೆ ನಿಗದಿಪಡಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಪಟ್ಟುಹಿಡಿದು ಸಾವಿರಾರೂ ರೈತರೊಂದಿಗೆ ಕಾರ್ಖಾನೆ ಮುಂದೆ ಬುಧವಾರವೂ ಕುಳಿತುಹೊಂಡಿದ್ದರು.

ಮತ್ತೊಂದಡೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾರ್ಖಾನೆಗೆ ಆಗಮಿಸಿದ್ದ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು, ಮೊದಲು ಕಾರ್ಖಾನೆ ಆರಂಭಿಸಬೇಕು. ಈಗಾಗಲೇ ರೈತರು ಕಬ್ಬು ಕಟಾವು ಮಾಡಿದ್ದಾರೆ. ಕಾರ್ಖಾನೆ ಬಂದಿಟ್ಟರೆ ಬೆಳೆಗಾರರಿಗೆ ನಷ್ಟವಾಗುತ್ತದೆ. ಕಾರ್ಖಾನೆ ಕ್ಷಣದಲ್ಲೇ ಪ್ರಾರಂಭಿಸಬೇಕು ಎಂದು ಪಟ್ಟುಹಿಡಿದು ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ಬಂದ ಮಾಡುವಂತೆ ಹೇಳುವ ಅಧಿಕಾರ ನನ್ನೊಳಗೊಂಡು ಜಿಲ್ಲಾಧಿಕಾರಿ ಶಾಸಕರಿಗಿಲ್ಲ. ಏನಿದ್ದರು ಸರ್ಕಾರ ಮತ್ತು ಸಚಿವರಿಗೆ ಮಾತ್ರ ಇದೇ. ದರ ನಿಗದಿಪಡಿಸುವ ಅಧಿಕಾರವೂ ಸರ್ಕಾರಕ್ಕಿದೆ. ಬೇಕಿದ್ದರೆ ಶಾಸಕ ಗುತ್ತೇದಾರ ಅವರು, ಸರ್ಕಾರದ ಮೇಲೆ ಒತ್ತಡಹಾಕಿ ಕಬ್ಬಿಗೆ ಹೆಚ್ಚಿನ ಬೆಲೆ ಕೊಡಿಸಲಿ, ಇದಕ್ಕೆ ಸ್ವಾಗತಿಸುತ್ತೇವೆ. ಆದರೆ ಸದ್ಯ ರೈತರ ಕಬ್ಬು ಕಾರ್ಖಾನೆಯಲ್ಲಿ ನುರಿಸಬೇಕು. ರೈತರ ಹಿತದೃಷ್ಟಿಯಿಂದ ಕಾರ್ಖಾನೆ ಶುರುಮಾಡಿ ಎಂದ ಆಗ್ರಹಿಸಿದ ಅವರು, ಕಬ್ಬು ಕೃಷಿಂಗ ನುರಿಸದಂತೆ ಯಾರು ಹೇಳಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿದ್ದ ಕಾರ್ಖಾನೆ ಅಧಿಕಾರಿಗಳನ್ನು ಬಿ.ಆರ್. ಪ್ರಶ್ನಿಸಿದರು. ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಕಾರ್ಖಾನೆ ಒಪ್ಪಂದದಂತೆ ನಡೆದುಕೊಳ್ಳುತ್ತಿಲ್ಲ: ಗುತ್ತೇದಾರ

ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಪಕ್ಷಾತೀತವಾಗಿದ್ದು ತಾವು ಸ್ವತ: ಆಡಳಿತ ಪಕ್ಷದ ಶಾಸಕರಾಗಿದ್ದರೂ ಕಬ್ಬು ಬೆಳೆಗಾರರ ಹಿತ ಕಾಪಾಡುವುದಕ್ಕೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದೇನೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಬುಧುವಾರ ಭೂಸನೂರು ಕಾರ್ಖಾನೆ ಎದುರು ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರ ಅವರು, ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ನೀಡಲು ಒಪ್ಪದೇ ಹೋದರೆ ಸಂಪೂರ್ಣವಾಗಿ ಕಾರ್ಖಾನೆಯಲ್ಲಿ ಯಾವುದೇ ಕಾರ್ಯ ಚಟುವಟಿಕೆ ಕೈಗೊಳ್ಳಬಾರದು. ಈ ವಿಷಯದ ಕುರಿತು ಈಗಾಗಲೇ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರನ್ನು ಭೇಟಿಯಾಗಿ ಕಬ್ಬು ಬೆಳೆಗಾರರ ಸ್ಥಿತಿಗತಿ ಮನವರಿಕೆ ಮಾಡಿದ್ದೇನೆ ಅವರು ಕರೆದಿರುವ ಸಭೆಯಲ್ಲಿ ಇದರ ಕುರಿತು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದರು.

ನೆರೆಯ ಅಫಜಲಪೂರದ ರೇಣುಕಾ ಸಕ್ಕರೆ ಕಾರ್ಖಾನೆ ನೀಡುವ ದರವನ್ನು ಇಲ್ಲಿಯೂ ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ ಅವರು, ರೇಣುಕಾ ಶುಗರ್ಸನವರು 2500ರಿಂದ 2600 ರೂಪಾಯಿ ವರೆಗೆ ಪ್ರತಿಟನ್ ಕಬ್ಬಿಗೆ ನೀಡುತ್ತಿದ್ದು, ಎನ್‍ಎಸ್‍ಎಲ್ ಕಾರ್ಖಾನೆಯುವರು ಸಹ ಇವರ ದರವನ್ನೇ ಪ್ರತಿವರ್ಷ ಅನುಸರಿಸುತ್ತಾ ಬಂದು ಈ ವರ್ಷ ಮಾತ್ರ ಅವರನ್ನು ಅನುಸರಿಸದೆ, 2400 ರೂಪಾಯಿ ಮಾತ್ರ ನೀಡುವ ಹೇಳಿಕೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿಗಳ ಆದೇಶದಂತೆ ಎನ್‍ಎಸ್‍ಎಲ್ 2500 ರೂಪಾಯಿ ಬೆಲೆ ನಿಗದಿಪಡಿಸಿದರೆ ಕಾರ್ಖಾನೆ ಆರಂಭಕ್ಕೆ ಯಾವುದೇ ತಕರಾರಿಲ್ಲ ಎಂದು ಅವರು ಹೇಳಿದರು.

ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ, ಶಿವರಾಜ ಕೋರಳ್ಳಿ, ಬಾಬುರಾವ ಸರ್, ರವೀಂದ್ರರೆಡ್ಡಿ, ಆನಂದರಾವ ಗಾಯಕವಾಡ, ಮಲ್ಲಿನಾಥ ಪರೇಣಿ, ಬಸವರಾಜ ಧನ್ನಾಜಿ ಸೇರಿದಂತೆ ಅನೇಕ ರೈತ ಮುಖಂಡರು ಮಾತನಾಡಿದರು. ಈ ವೇಳೆ ಅನೇಕ ಮುಖಂಡರು ಸೇರಿ ನೂರಾರು ಮಂದಿ ಭಾಗವಹಿಸಿದ್ದರು.

ಈ ಎರಡು ಬಣಗಳ ಪ್ರತಿಭಟನೆಯಿಂದಾಗಿ ಸಕ್ಕರೆ ಕಾರ್ಖಾನೆ ಆರವರಣದಲ್ಲಿ ಬೀಗುವಿನ ವಾತಾವರಣ ಉಂಟಾಗಿ ಪರಿಸ್ಥಿತಿ ತಹಬಂದಿಗೆ ತರಲು ಪೊಲೀಸರು ಹೆಣಗಾಡಿದ ಪ್ರಸಂಗ ನಡೆದಿದೆ.