ಎನ್‍ಇಪಿ; ವಿಶ್ವವ್ಯಾಪಿ ಸಂಶೋಧನೆಗೆ ಚಾಚಿಕೊಂಡ ಗುಲ್ಬರ್ಗ ವಿವಿ

ಕಲಬುರಗಿ:ಫೆ.28: ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಜಗತ್ತಿನ ಬೇರೆ ಬೇರೆ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ನೂತನ ಶಿಕ್ಷಣ ನೀತಿ ಅಡಿ ತನ್ನ ಸಂಶೋಧನಾ ವ್ಯಾಪ್ತಿ ವಿಸ್ತಾರಕ್ಕೆ ಮುಂದಾಗಿದೆ ಎಂದು ಉಪಕುಲಪತಿ ಪ್ರೊ.ದಯಾನಂದ ಅಗಸರ ತಿಳಿಸಿದರು.

ಇಲ್ಲಿನ ರಾಧಾಕೃಷ್ಣ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಸುದ್ದಿಗೋಷ್ಠಿಯಲ್ಲಿ ಅವರು ಒಟ್ಟು ನಾಲ್ಕು ಪ್ರಧಾನ ವಿಷಯಗಳ ಕುರಿತು ಪ್ರಸ್ತಾಪಿಸಿದರು.

ಗುಲ್ಬರ್ಗ ವಿವಿಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಪಾಲ್ಗೊಂಡಿರುವ ಹೈದರಾಬಾದಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ಮುಖ್ಯ ವಿಜ್ಞಾನಿ ಡಾ.ಎಚ್.ಎಂ.ಸಂಪತ್‍ಕುಮಾರ್ ಅವರು ಗುಲ್ಬರ್ಗ ವಿವಿಯ ಹಳೆಯ ವಿದ್ಯಾರ್ಥಿ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಡಾ.ಸಂಪತ್‍ಕುಮಾರ್ ಅವರು ರಾಸಾಯನಿಕ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಿರಿಯ ವಿಜ್ಞಾನಿಯಾಗಿದ್ದು, ಇತ್ತೀಚೆಗೆ ಇಡೀ ಜಗತ್ತನ್ನು ಅಲುಗಾಡಿಸಿದ ಕೋವಿಡ್ ಕ್ಷೋಭೆ ವೇಳೆ ಜೀವರಕ್ಷಕ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಸಂಪತ್ ಅವರ ಕೊಡುಗೆ ಸಾಕಷ್ಟಿದೆ ಎಂದರು.

ಮಧುಮೇಹ ಗಾಯ; ಉಪಶಮನಕ್ಕೆ ಸಂಶೋಧನೆ:

ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಜಿ.ಎನ್.ವಿದ್ಯಾಸಾಗರ ಹಾಗೂ ಬ್ರಿಟನ್ ದೇಶದ ಯೂನಿವರ್ಸಿಟಿ ಆಫ್ ಬ್ರಾಡ್‍ಫೋರ್ಡ್‍ನ ಡಾ.ಎಸ್.ಎ.ಬೆಹರೂಸ್ ಖಗಾನಿ ಅವರು ಜಂಟಿಯಾಗಿ ಮಧುಮೇಹದ ಗಾಯದ ಉಪಶಮನಕ್ಕೆ ಸಸ್ಯಮೂಲದ ಚಿಕಿತ್ಸೆ ಅಭಿವೃದ್ಧಿಪಡಿಸಿದ್ದಾರೆ. ಈ ಪೈಕಿ ಪ್ರೊ.ವಿದ್ಯಾಸಾಗರ್ ಸಸ್ಯಮೂಲದ ಔಷಧಿ ಸಂಶೋಧಿಸಿದ್ದು, ಪ್ರೊ.ಖಗಾನಿ ನ್ಯಾನೊ ತಂತ್ರಜ್ಞಾನ ಬಳಕೆಯೊಂದಿಗೆ ನ್ಯಾನೊ-ಪದರ ಅಭಿವೃದ್ಧಪಡಿಸಿದ್ದಾರೆ. ಈ ಔಷಧವನ್ನು ಮಧುಮೇಹಿಗಳನ್ನು ಹೆಚ್ಚು ದಿನಗಳ ಕಾಲ ಕಾಡುವ ಗಾಯದ ಮೇಲೆ ಬ್ಯಾಂಡೇಜ್ ಬಳಸಿ ಅಳವಡಿಸುವುದರಿಂದ ಗಾಯದ ಕೊಳೆಯಲು ಅವಕಾಶವಿಲ್ಲದೆ ಉಪಶಮನಗೊಳ್ಳಲಿದೆ ಎಂದು ವಿವರಿಸಿದರು.
ಇನ್ನು, ಈ ನಿಟ್ಟಿನಲ್ಲಿ ಬರುವ ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವೊಂದನ್ನು ಹಮ್ಮಿಕೊಳ್ಳಲಾಗುತ್ತಿದೆ. ಮತ್ತೊಂದೆಡೆ, ಸಂಶೋಧನಾ ವಿನಿಮಯ ಯೋಜನೆಯ ಅಡಿಯಲ್ಲಿ ಪ್ರೊ.ವಿದ್ಯಾಸಾಗರ್ ಅವರು ಮೂರು ತಿಂಗಳು ಬ್ರಾಡ್‍ಫೋರ್ಡ್ ವಿವಿಯಲ್ಲಿ ಹಾಗೂ ಡಾ.ಖಗಾನಿ ಮೂರು ತಿಂಗಳು ಗುಲ್ಬರ್ಗ ವಿವಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದರು.

ವಿಶ್ವದರ್ಜೆಯ ಹಾಸ್ಟೆಲ್:ಗುಲ್ಬರ್ಗ ವಿಶ್ವವಿದ್ಯಾಲಯವು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಂಶೋಧನೆ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಿಗೆ ತೆರೆದುಕೊಳ್ಳಲು ಪೂರಕವಾಗಿ ವಿವಿ ಕ್ಯಾಂಪಸ್‍ನಲ್ಲಿ ವಿಶ್ವ ದರ್ಜೆಯ ಹಾಸ್ಟೆಲ್ ಮತ್ತು ಅತಿಥಿ ಗೃಹ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಪ್ರೊ.ಅಗಸರ್ ತಿಳಿಸಿದರು.

ಈ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಹೆಚ್ಚು ಅನುದಾನದ ಕ್ರೋಢೀಕರಣಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿ ಕಾರ್ಖಾನೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಕಾರ್ಪೊರೇಟ್ ಫಂಡ್ ಸಂಗ್ರಹಕ್ಕೆ ಪ್ರತ್ಯೇಕ ಖಾತೆ ಆರಂಭಿಸಲಾಗುವುದು ಎಂದು ನುಡಿದರು.

ಕುಲಸಚಿವ ಡಾ.ಶರಣಪ್ಪ ಸತ್ಯಂಪೇಟೆ, ಗುಲ್ಬರ್ಗ ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಪ್ರೊ.ಲಿಂಗಪ್ಪ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎನ್.ವಿದ್ಯಾಸಾಗರ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ.ಚಂದ್ರಕಾಂತ ಕೆಳಮನಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ದಂಡಿ ವಿವಿಗೆ ಐವರು ವಿದ್ಯಾರ್ಥಿಗಳ ಪಯಣ

ನೂತನ ಶಿಕ್ಷಣ ನೀತಿ ಅಡಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ವ್ಯಾಪ್ತಿಯ ಐವರು ವಿದ್ಯಾರ್ಥಿಗಳನ್ನು ಬಹುಶಿಸ್ತೀಯ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಕಲಬುರಗಿಯ ಶ್ರೀ ಶರಣಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐದು ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ ಎಂದು ಗುಲ್ಬರ್ಗ ವಿವಿ ಉಪಕುಲಪತಿ ಪ್ರೊ.ದಯಾನಂದ ಅಗಸರ್ ಮಾಹಿತಿ ಹಂಚಿಕೊಂಡರು.

ಕಲಬುರಗಿ ಜಿಲ್ಲೆಯ ಬುಡಕಟ್ಟು ಜನರ (ಲಂಬಾಣಿ) ಕರುಳಿನ ಆರೋಗ್ಯದಲ್ಲಿ ಪ್ರಧಾನ ಪಾತ್ರ ವಹಿಸುವ ಪೌಷ್ಠಿಕಾಂಶಗಳು, ರೋಗ ನಿರೋಧಕ ಶಕ್ತಿಯ ನಿರ್ವಹಣೆ ಕುರಿತಂತೆ ಈ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಮಂಡಿಸುತ್ತಿದ್ದಾರೆ. ಎಸ್.ಬಿ. ಸೈನ್ಸ್ ವಿಭಾಗದ ಐದನೇ ಸೆಮ್ ವಿದ್ಯಾರ್ಥಿ ಅವಿನಾಶ್ ವಿಶ್ವನಾಥ ಮರೂರ್, ಕಲಾ ವಿಭಾಗದ ಐದನೇ ಸೆಮ್ ವಿದ್ಯಾರ್ಥಿ ಶ್ರವಣಕುಮಾರ್ ದೇವೀಂದ್ರಕುಮಾರ್, ವಿಜ್ಞಾನ ವಿಭಾಗದ ಐದನೇ ಸೆಮ್ ವಿದ್ಯಾರ್ಥಿನಿ ಮೋನಿಕಾ ಪಂಚಾಳ್, ಇದೇ ವಿಭಾಗದ ಸಂಜನಾ ಹಿಬಾರೆ ಮತ್ತು ವಾಣಿಜ್ಯ ವಿಭಾಗದ ಆರತಿ ಚವ್ಹಾಣ್ ಈ ತಂಡದಲ್ಲಿದ್ದಾರೆ ಎಂದರು.