
ಕಮಲಾಪೂರ: ನ.20:ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಇಂದಿನ ಅವಶ್ಯಕವಿದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎನ್‍ಇಪಿ ಜಾರಿಗೆ ತಂದಿದ್ದು,ಈಗಿನ ಸರ್ಕಾರ ರದ್ದುಗೊಳಿಸುತ್ತಿರುವ ಕ್ರಮ ಖಂಡನೀಯ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ತೀವ್ರವಾಗಿ ಖಂಡಿಸಿದ್ದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದ ಪಾಲಕರ, ವಿದ್ಯಾರ್ಥಿಗಳ, ಶಿಕ್ಷಣ ತಜ್ಞರ, ಉನ್ನತ ಅಧಿಕಾರಿಗಳ ಅಭ್ರಿಪಾಯ ಪಡೆದ ನಂತರವೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತ್ತು.ರಾಜ್ಯದಲ್ಲಿ ಈಗಾಗಲೇ ಇದು ಜಾರಿಗೊಂಡು ಎರಡು ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯಡಿ ತಮ್ಮ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಇದನ್ನು ರದ್ದುಗೊಳಿಸಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.ರಾಜ್ಯ ಸರ್ಕಾರ ಎನ್‍ಇಪಿಯನ್ನು ಹಿಂಪಡೆಯಲು ತೀರ್ಮಾನಿಸಿರುವುದು ವಿಷಾದನೀಯ. ಶಿಕ್ಷಣದ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪುನಃ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು.
ದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಶಿಕ್ಷಣ ಪದ್ಧತಿ ಚಾಲ್ತಿಯಲ್ಲಿದೆ. ಇಂಥ ಟೀಕೆಗಳ ನಡುವೆಯೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಣದ ಬಗ್ಗೆ ಬೋಧನೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು. ಎನ್‍ಇಪಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸಾಂಸ್ಕøತಿಕವಾಗಿ ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ನೀಡಿದೆ ಇದನ್ನು ಸರ್ಕಾರ ಅಧ್ಯಯನ ಮಾಡಲಿ ಎಂದರು.ಚುನಾವಣಾ ಪ್ರಣಾಳಿಕೆಯಲ್ಲಿಯೇ ಎನ್‍ಇಪಿ ರದ್ದತಿ ಬಗ್ಗೆ ಹೇಳಿದ್ದೇವೆ ಎನ್ನುವವರು ಯಾವ ಶಿಕ್ಷಣ ತಜ್ಞರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ? ಮುಂಬರುವ ದಿನಗಳಲ್ಲಿ ಐಐಟಿ, ಐಐಎಂ, ಐಐಎಸ್‍ಸಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲಾರಂಭಿಸಿದಾಗ ಕರ್ನಾಟಕದ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.
ಎನ್‍ಇಪಿ ರದ್ದತಿ ನಿಲುವು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎನ್‍ಇಪಿ ರದ್ದುಗೊಳಿಸುವನೆಂದು ಹೇಳಿಕೊಳ್ಳುತ್ತಿರುವವರು ಅದನ್ನು ರೂಪಿಸಿದವರ ಜತೆಯಲ್ಲಿ ಚರ್ಚಿಸಿ ನಂತರ ತೀರ್ಮಾನಿಸಬೇಕಾಗಿತ್ತು ಎಂದರು.