ಎನ್ಆರ್‌ಬಿಸಿ ಕಾಲುವೆಗೆ ನೀರು ಹರಿಕೆ ಪೂರ್ವಭಾವಿ ಸಭೆ

ಡಿಸೆಂಬರ್ 1 ರಿಂದ ಏ.10 ರವರೆಗೆ ನೀರಿನ ಬೇಡಿಕೆ
ದೇವದುರ್ಗ.ನ.08- ನಾರಾಯಣಪೂರು ಬಲದಂಡೆ ಕಾಲುವೆಗೆ ಡಿಸೆಂಬರ್ 1 ರಿಂದ ಏಪ್ರೀಲ್ 10 ರವರೆಗೆ ನೀರು ಹರಿಸುವಂತೆ ರೈತರು ಶಾಸಕ ಅವರಿಗೆ ಮನವಿ ಮಾಡಿದ್ದು, ನ. 13 ರಂದು ಆಲಮಟ್ಟಿಯಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಭಾಗದ ಸಂಸದರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಒಕ್ಕೊರಳಿನಿಂದ ರೈತರ ಅಭಿಪ್ರಾಯದಂತೆ ಕಾಲುವೆ ನೀರು ಹರಿಸಲು ತೀರ್ಮಾನಕ್ಕೆ ಒತ್ತಾಯಿಸಲಾಗುತ್ತದೆಂದು ಶಾಸಕ ಕೆ.ಶಿವನಗೌಡ ನಾಯಕ ಅವರು ಭರವಸೆ ನೀಡಿದರು.
ಅವರಿಂದು ಪಟ್ಟಣದ ಪ್ರವಾಸ ಮಂದಿರದಲ್ಲಿ ಪೂರ್ವಭಾವಿ ರೈತರು ಮತ್ತು ಪಕ್ಷಾತೀತವಾಗಿ ಮುಖಂಡರ ಸಭೆಯಲ್ಲಿ ಬಂದ ಅಭಿಪ್ರಾಯಗಳಿಗೆ ಸ್ಪಂದಿಸಿ, ಮಾತನಾಡಿದರು. ಆಲಮಟ್ಟಿಯಲ್ಲಿ 123 ಟಿಎಂಸಿ, ನಾರಾಯಣಪೂರ ಜಲಾಶಯದಲ್ಲಿ 33 ಟಿಎಂಸಿ ಸೇರಿ ಒಟ್ಟು 156 ನೀರಿನ ಸಂಗ್ರಹವಿದೆ. ಈ ಭಾಗದ ಮುಖ್ಯ ಬೆಳೆಗಳಾದ ಮೆಣಸಿನಕಾಯಿ, ಭತ್ತ ಸೇರಿದಂತೆ ಇತರೆ ಬೆಳೆಗೆ ಯಾವುದೇ ತೊಂದರೆಯಾಗದಂತೆ 4 ತಿಂಗಳು 10 ದಿನ ಕಾಲ ನೀರು ಹರಿಸಲು ಕೋರಲಾಯಿತು. ಯಾವುದೇ ಕಾರಣಕ್ಕೂ ವಾರಬಂದಿ ನಿರ್ಧಾರ ಕೈಗೊಳ್ಳದಂತೆ ರೈತರು ಒತ್ತಾಯಿಸಿದರು. ವಾರಬಂದಿಯಿಂದ ವಿತರಣಾ ಕಾಲುವೆ 15 ರಿಂದ 18 ರ ವರೆಗಿನ ಜನರಿಗೆ ತೊಂದರೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ 4 ತಿಂಗಳು 10 ದಿನದ ಕಾಲ ನಿರಂತರ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನಿಸಬೇಕು ಮತ್ತು ಇದರನ್ವಯ ನೀರು ಹರಿಸುವಂತೆ ಕೋರಲಾಯಿತು. ಈ ವಿಷಯವನ್ನು ನ.13 ರಂದು ಆಲಮಟ್ಟಿಯಲ್ಲಿ ನಡೆಯುವ ಸಲಹಾ ಸಮಿತಿ ಸಭೆಯಲ್ಲಿ ಈ ಭಾಗದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಕ್ಕೊರಳಿನ ಧ್ವನಿಯಿಂದ ನಿರಂತರ ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ. ತಿಂಗಳಿಗೆ 5 ದಿನಗಳು ಹೊರತು ಪಡಿಸಿ, ಕನಿಷ್ಟ 25 ದಿನ ನೀರು ಹರಿಸುವ ನಿರ್ಧಾರ ಕೈಗೊಳ್ಳುವಂತೆ ಮಾಡಲಾಗುತ್ತದೆ.
ನಾರಾಯಣಪೂರ ಬಲದಂಡೆ ಕಾಲುವೆಯ ಶೂನ್ಯ ವಿತರಣಾ ಕಾಲುವೆಯಿಂದ 18 ನೇ ವಿತರಣಾ ಕಾಲುವೆವರೆಗೂ ಸಂಪೂರ್ಣ ನವೀಕರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪರವರಿಂದ 3 ರಿಂದ 3.50 ಸಾವಿರ ಕೋಟಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು. ನಾರಾಯಣಪೂರ ಬಲದಂಡೆ ಕಾಲುವೆ 95 ಕಿ.ಮೀ.ವರೆಗೂ ಕಾಮಗಾರಿಯಲ್ಲಿ ಏಪ್ರೀಲ್ ನಂತರ 53 ಕಿ.ಮೀ. ಕಾಮಗಾರಿಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಕಾಶ ಪಾಟೀಲ್, ಜಂಬಣ್ಣ ನಿಲೋಗಲ್, ಸಿದ್ದಣ್ಣ ಬಿ.ಗಣೇಕಲ್, ಬಸವನಗೌಡ ವೆಂಕಟಾಪೂರು, ಹನುಮಂತ ಕಟ್ಟಿಮನಿ, ಭೀಮನಗೌಡ ಮೇಟಿ, ಗೋಪಾಲಕೃಷ್ಣ ಮೇಟಿ, ನಾಗರಾಜ ಗೋಗಿ ನಾಯಕ, ಬೂದಯ್ಯ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.