ಎದೆ ಹಾಲು: ತಪ್ಪು ಕಲ್ಪನೆಯಿಂದ ಹೊರ ಬನ್ನಿ

ಬೀದರ್:ಆ.4: ಎದೆ ಹಾಲು ಕುರಿತ ತಪ್ಪು ಕಲ್ಪನೆಗಳಿಂದ ತಾಯಂದಿರು ಹೊರ ಬರಬೇಕು ಎಂದು ಡಾ. ಶರಣ ಬುಳ್ಳಾ ಹೇಳಿದರು.

ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಹುಮನಾಬಾದ್‍ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೌಂದರ್ಯ ಹಾಳಾಗುತ್ತದೆ ಎನ್ನುವ ಭೀತಿಯಿಂದ ಅನೇಕ ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ದೂರ ಇರುತ್ತಾರೆ. ಆದರೆ, ವಾಸ್ತವದಲ್ಲಿ ಮಗುವಿಗೆ ಹಾಲು ಕುಡಿಸುವುದರಿಂದ ತಾಯಿಯ ಶರೀರದ ಕೊಬ್ಬಿನಾಂಶ ಕರಗಿ ಸೌಂದರ್ಯ ಹೆಚ್ಚುತ್ತದೆ ಎಂದು ತಿಳಿಸಿದರು.

ತಾಯಿ ಎದೆ ಹಾಲು ಮಕ್ಕಳಿಗೆ ಪರಿಪೂರ್ಣ ಆಹಾರವಾಗಿದೆ. ಹೀಗಾಗಿ 6 ತಿಂಗಳ ವರೆಗೆ ಎದೆ ಹಾಲನ್ನೇ ಉಣಿಸಬೇಕು. ನಂತರ ಪೂರಕ ಆಹಾರ ಕೊಡಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಮಾತನಾಡಿ, ತಾಯಿ ಎದೆಹಾಲು ಮಕ್ಕಳ ಹಲ್ಲು ಗಟ್ಟಿಗೊಳಿಸುತ್ತದೆ. ಮಿದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತಾಯಿ ಹಾಲು ಹೆಚ್ಚಾಗಿ ಕುಡಿದ ಮಗುವಿನ ಬುದ್ಧಿ ಮಟ್ಟವೂ ಹೆಚ್ಚಾಗಿರುತ್ತದೆ ಎಂದು ಹೇಳಿದರು.

ಕ್ಲಬ್ ಕಾರ್ಯದರ್ಶಿ ಶಿವಕುಮಾರ ಪಾಖಾಲ್, ನಿಕಟಪೂರ್ವ ಅಧ್ಯಕ್ಷ ನಿತಿನ್ ಕರ್ಪೂರ, ಹುಮನಾಬಾದ್ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ನಾಗರಾಜ ಕರ್ಪೂರ, ಕ್ಲಬ್ ಸದಸ್ಯರು, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.