ಎದೆ ಹಾಲಿಗಿಂತ ಮಿಗಿಲಾದ ಪೌಷ್ಟಿಕ ಆಹಾರ  ಇನ್ನೊಂದಿಲ್ಲ

ಸಂಜೆವಾಣಿ ವಾರ್ತೆ

ದಾವಣಗೆರೆ. ಮಾ.೮: ನಮಗೆ ಬ್ಲಡ್ ಬ್ಯಾಂಕ್ ಗೊತ್ತಿತ್ತು. ಆದರೆ ಎದೆ ಹಾಲಿನ ಬ್ಯಾಂಕ್ ಕುರಿತು ಗೊತ್ತಿರಲಿಲ್ಲ. ಮಕ್ಕಳಿಗೆ ತಾಯಿಯ ಎದೆ ಹಾಲಿಗಿಂತ ಮಿಗಿಲಾದ ಪೌಷ್ಟಿಕ ಆಹಾರ  ಇನ್ನೊಂದಿಲ್ಲ. ನಾವು ನಮ್ಮ ತಾಯಿಯ ಹಾಲನ್ನು ಪೂರ್ಣವಾಗಿ ಕುಡಿದಿದ್ದೇವೆ. ಅದಕ್ಕೆ ಇಷ್ಟು ಆರೋಗ್ಯವಾಗಿದ್ದೇವೆ ಎನ್ನುವ ಮೂಲಕ ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು   ತಾಯಿ ಹಾಲಿನ ಮಹತ್ವವನ್ನು ಸಾರಿದರು. ಅವರು  ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬಾಪೂಜಿ ‘ಎದೆ ಹಾಲಿನ ಬ್ಯಾಂಕ್’ ಉದ್ಘಾಟನೆ, ನವೀಕೃತ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ವಿಸ್ತರಿತ ನವಜಾತ ಶಿಶು ವಿಭಾಗದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ದೇವಸ್ಥಾನ, ಮಸೀದಿ,ಚರ್ಚ್ ಎಂದು ಹೋಗುವ ನಾವುಗಳು ವಾರಕ್ಕೊಮ್ಮೆಯಾದರೂ ಆಸ್ಪತ್ರೆಗೆ ಭೇಟಿ ನೀಡಿದರೆ ಬದುಕಿನ ಸತ್ಯದ ಅರಿವಾಗುತ್ತದೆ.ಶನಾನು ಮಕ್ಕಳ ಚಿಕಿತ್ಸಾ ಘಟಕದ ಬಳಿ ಹೋದಾಗ ಆ ಮಕ್ಕಳ ನೋವಿನ ಅಳು, ತಾಯಿ, ಪೋಷಕರ ಆತಂಕದ ಮುಖಗಳು ನನ್ನನ್ನು ವಿಚಲಿತನನ್ನಾಗಿ ಮಾಡಿತು.  ದೇವಸ್ಥಾನಗಳ ಬದಲಿಗೆ ಇಲ್ಲಿ ಬಂದು ನೊಂದವರಿಗೆ ಅನುಕಂಪ ತೋರಿಸಿದರೆ ಅದಕ್ಕಿಂತ ಭಗವಂತನ ಸೇವೆ ಇನ್ನೊಂದಿಲ್ಲ ಅನಿಸುತ್ತದೆ ಎಂದರು.ಮಕ್ಕಳ ಆಸ್ಪತ್ರೆಯ ಶ್ರೇಯಸ್ಸಿಗೆ ಶ್ರಮಿಸಿದ ಡಾ. ನಿರ್ಮಲ ಕೇಸರಿ ಅವರ  ಸೇವೆಯನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕಿದೆ ಎಂದು ಶ್ರೀಗಳು, ಒಂದು ಜೀವವನ್ನು ರಕ್ಷಿಸುವಂತಹ ಕೆಲಸವನ್ನು ಮಾಡುವ ವೈದ್ಯರ ಕಾರ್ಯ ಪುಣ್ಯ ಕಾರ್ಯವಾಗಿದೆ. ಅವರು ರೋಗಿಯ ಆರೋಗ್ಯದ ದೃಷ್ಟಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರಲ್ಲದೆ, ಇಲ್ಲಿ ನಮ್ಮ ಅನುಭವ ಮಂಟಪದಲ್ಲಿ ಓದಿದವರು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಸಂತಸವಾಯಿತು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಬಾಪೂಜಿ ಮಕ್ಕಳ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷರು ಆದ ಎಸ್.ಎಸ್. ಮಲ್ಲಿಕಾರ್ಜುನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಇಎ ಆಡಳಿತ ಮಂಡಳಿ ಸದಸ್ಯರುಗಳಾದ ಅಥಣಿ ಎಸ್. ವೀರಣ್ಣ, ಕಿರುವಾಡಿ ಗಿರಿಜಮ್ಮ ಉಪಸ್ಥಿತರಿದ್ದರು. ಬಿಇಎ ಆಡಳಿತ ಮಂಡಳಿ ಸದಸ್ಯರುಗಳಾದ ಎ.ಎಸ್. ನಿರಂಜನ್, ಸಂಪನ್ನ ಮುತಾಲಿಕ್ ಉಪಸ್ಥಿತರಿದ್ದರು.