ಎದೆನೋವು ತಾಳದೆ ಕಂಟ್ರೋಲರ್ ಆತ್ಮಹತ್ಯೆ

ಕಲಬುರಗಿ,ಆ.20-ಎದೆನೋವು ತಾಳದೆ ಬಸ್ ಕಂಟ್ರೋಲರ್ ಒಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಾಂತಿನಗರದ ಕೆಎಸ್‍ಆರ್‍ಟಿಸಿ ಕ್ವಾಟರ್ಸ್‍ನಲ್ಲಿ ನಡೆದಿದೆ.
ಕೆಕೆಆರ್‍ಟಿಸಿ ಡಿಪೋ ನಂಬರ್2 ರಲ್ಲಿ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದ ಹರಿಹರ ಪವಾರ ಎಂಬುವವರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎದೆನೋವಿನಿಂದ ಬಳಲುತ್ತಿದ್ದ ಹರಿಹರ ಪವಾರ ಅವರಿಗೆ ಮೂರು ವರ್ಷಗಳ ಹಿಂದೆ ಆಪರೇಷನ್ ಮಾಡಿಸಿ ಸ್ಟಂಟ್ ಅಳವಡಿಸಲಾಗಿತ್ತು. ಆದರೂ ಆಗಾಗ ಎದೆಬೇನೆ ಕಾಣಿಸಿಕೊಂಡು ನೋವು ಅನುಭವಿಸುತ್ತಿದ್ದರು. ಇದಕ್ಕಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಸರಿಯಾಗಿ ಚಿಕಿತ್ಸೆ ಕೊಡಿಸಲು ಆಗಿರಲಿಲ್ಲ. ಆ.18 ರಂದು ಮಧ್ಯಾಹ್ನ ಅವರ ಪತ್ನಿ ಸುಶೀಲಾ ಪವಾರ ಅವರು ಮಹಿಳಾ ಸಂಘದ ಸದಸ್ಯರ ಹಣವನ್ನು ಬಂಜಾರ ಸ್ವಯಂ ಸ್ವಸಹಾಯ ಬ್ಯಾಂಕಿಗೆ ಜಮಾ ಮಾಡಲೆಂದು ಹೋದ ವೇಳೆ ಮನೆಯ ಛತ್ತಿನ ಕೊಂಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಮಗಳಿದ್ದಾಳೆ. ಈ ಸಂಬಂಧ ಸುಶೀಲಾ ಪವಾರ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.