ಎದುರಾಳಿಗಳಿಗೆ ಮೌನದಿಂದ ಟಕ್ಕರ್ ಕೊಡುತ್ತಿರುವ ಜಿ.ಟಿ. ದೇವೇಗೌಡ

ಮೈಸೂರು:ಮಾ:30: ಜಿಲ್ಲೆಯಲ್ಲಿ ತಮ್ಮ ಎದುರಾಳಿಗೆ ಮೌನವಾಗಿಯೇ ಟಕ್ಕರ್ ಕೊಡುತ್ತಿದ್ದ ಶಾಸಕ ಜಿ.ಟಿ.ದೇವೇಗೌಡ ಗೇಮ್ ಪ್ಲಾನ್ ಚೇಂಜ್ ಮಾಡಿ ಪಿ.ಎಂ.ಪ್ರಸನ್ನ ಅವರನ್ನು ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕೆ.ಈರೇಗೌಡ ಹಾಗೂ ಕೆ.ಎಸ್.ಕುಮಾರ್ ಅವರನ್ನು ಅಭ್ಯರ್ಥಿ ಮಾಡಲು ಒಲವು ತೋರಿದ್ದ ಗೌಡರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಸಾ.ರಾ.ಮಹೇಶ್ ಪ್ರಾಬಲ್ಯ ಕುಗ್ಗಿಸಲು ಪಿರಿಯಾಪಟ್ಟಣ ಶಾಸಕ ಮಹದೇವ್ ಮಗನಿಗೆ ಮಣೆ ಹಾಕಿದ್ದಾರೆ. ಈ ಮೂಲಕ ಸಾ.ರಾ.ಮಹೇಶ್ ಜತೆ ಇದ್ದ ಶಾಸಕ ಮಹದೇವ್ ಬಹುತೇಕ ಜಿ.ಟಿ.ದೇವೇಗೌಡ ಅವರ ಪಾಳಯಕ್ಕೆ ಜಿಗಿದಂತಾಗಿದೆ.
ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಪ್ರಸನ್ನ ಅವರನ್ನು ಸರ್ವಾನುಮತದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಎರಡು ಗಂಟೆಗೆ ಚುನಾವಣೆ ನಡೆಯಲಿದೆ. ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ.ಮಹದೇವ ಅವರ ಪುತ್ರ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಪಕ್ಷೀಯ ಶಾಸಕನ ಪುತ್ರನ ವಿರುದ್ಧ ಪ್ರಚಾರ ನಡೆಸಿದರೂ ಗೆಲ್ಲುವುದನ್ನು ತಡೆಯಲು ಸಾಧ್ಯವಾಗಲಿಲ್ಲ.