ಎಥನಾಲ್ ಘಟಕ ಸ್ಥಾಪಿಸದಂತೆ ಪರಿಸರ ಭವನಕ್ಕೆ ಮುತ್ತಿಗೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.02 : ಬೆಂಗಳೂರಿನ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ ಪರಿಸರ ಭವನಕ್ಕೆ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಮತ್ತು ಮಹಿಳೆಯರು ಮುತ್ತಿಗೆ ಹಾಕಿ ಕಾರ್ಖಾನೆಯ ಎಥನಾಲ್ ಘಟಕ ಮತ್ತು ಡಿಸ್ಟಲರಿ ಸ್ಥಾಪನೆಗೆ ಅನುಮತಿ ನೀಡದಂತೆ ಪರಿಸರ ಮಾಲಿನ್ಯ ಮಹಾಮಂಡಳಿಯ ಅಧ್ಯಕ್ಷ ಶಾಂತ ತಿಮ್ಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅನಿರ್ದಿಷ್ಟಾವಧಿಯ ಹೋರಾಟದ ಎಚ್ಚರಿಕೆ ನೀಡಿದರು.
ತಾಲ್ಲೂಕು ರೈತಸಂಘದ ಮುಖಂಡರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು ತಾಲೂಕಿನ ಐಸಿಎಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಡಿಸ್ಟಿಲರಿ ಘಟಕವನ್ನು ಸ್ಥಾಪಿಸುವ ಏಕೈಕ ಉದ್ದೇಶದಿಂದ ದಿನಾಂಕ: 06.03.2024ರಂದು ಕರೆದಿರುವ ಸಾರ್ವಜನಿಕ ಸಭೆಯನ್ನು ರದ್ದು ಮಾಡಿ ಕಬ್ಬು ಅರೆಯುವಿಕೆಯನ್ನು ಹೊರತುಪಡಿಸಿ,ಎಥನಾಲ್ ಡಿಸ್ಪಿಲರಿ ಘಟಕವನ್ನು ಸ್ಥಾಪನೆ ಮಾಡದಂತೆ ಮತ್ತು ಈ ಎಥನಾಲ್ ಡಿಸ್ಟಿಲರಿ ಘಟಕ ಸ್ಥಾಪನೆಯ ಪ್ರಸ್ತಾವನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಒತ್ತಾಯಿಸಿದರು.
ಪರಿಸರ ಭವನಕ್ಕೆ 350ಕ್ಕೂ ಹೆಚ್ಚು ರೈತ ಮುಖಂಡರು ತೆರಳಿ ಕಾರ್ಖಾನೆಯ ಜನ ವಿರೋಧಿ ಧೋರಣೆಯ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ 2011ನೇ ಸಾಲಿನಲ್ಲಿ ಎಥನಾಲ್ ಡಿಸ್ಟಿಲರಿ ಮತ್ತು ವಿದ್ಯುತ್ ಕೋಜನರೇಶನ್ ಘಟಕಗಳಿಗೆ ಹೊಸ ವಿನೂತನ ತಂತ್ರಜ್ಞಾನವನ್ನು ಅಳವಡಿಸುತ್ತೇವೆಂದು ಯೋಜನೆಯಲ್ಲಿ ಒಪ್ಪಿಕೊಂಡಿರುವ ಕಾರ್ಖಾನೆ ಆದರೆ ಈ ಅಂಶವನ್ನು ಜಾರಿಗೊಳಿಸದೇ ಹಳೆಯ ತಂತ್ರಜ್ಞಾನವನ್ನೇ ಮುಂದುವರಿಸುತ್ತಾ ಅದನ್ನು ಸೂಕ್ತ ನಿರ್ವಹಣೆ ಇಲ್ಲದೆ ವಿಷಕಾರಿ ಹಾರುವ ಬೂದಿ ಭಾಗ್ಯ ನೀಡುವುದರ ಮೂಲಕ ಕಾರ್ಖಾನೆಯ ಅಕ್ಕ ಪಕ್ಕದ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಇಂತಹ ಬೇಜವಾಬ್ದಾರಿತನ ಕಾರ್ಖಾನೆ ಆಡಳಿತ ಮಂಡಳಿಯ ಆವರಣದಲ್ಲಿ ಅಪಾಯಕಾರಿ ಘಟಕಗಳಂತಹ ಎಥನಾಲ್ ಮತ್ತು ಡಿಸ್ಪೀಲರಿ ನಿರ್ಮಾಣವಾದರೆ ಕಾರ್ಖಾನೆ ವ್ಯಾಪ್ತಿಯ ಗ್ರಾಮಗಳ ರೈತರ ಬದುಕು ನರಕವಾಗುವುದು ಕಟ್ಟಿಟ್ಟ ಬುತ್ತಿ ಅಲ್ಲವೇ..? ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ನಿಮ್ಮ ಕೇಂದ್ರ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ನೀವು ಕಾರ್ಖಾನೆಗೆ ಕಾಟಾಚಾರಕ್ಕೆ ಆಗಮಿಸಿ ಕಳ್ಳರಂತೆ ಕಾರ್ಖಾನೆಯ ಹಿಂಭಾಗಲಿನಿಂದ ಹೋಗಿದ್ದೀರಿ ಎಂದು ಪರಿಸರ ಮಾಲಿನ್ಯ ಮಂಡಳಿಯ ಅಧ್ಯಕ್ಷ ಶಾಂತ ತಿಮ್ಮಯ್ಯ ರವರಿಗೆ ತರಾಟೆಗೆ ತೆಗೆದುಕೊಂಡರು. ಕಾರ್ಖಾನೆ ಸ್ಥಾಪನೆಗೊಂಡ ದಿನದಿಂದ ಇಲ್ಲಿಯವರೆಗೂ ಸುತ್ತಮುತ್ತಲಿನಲ್ಲಿರುವ ರೈತ ಬೆಳೆಯುವ ಫಸಲುಗಳ ಮೇಲೆ ಪರಿಣಾಮಕಾರಿಯಾಗಿ ಮಾಲಿನ್ಯ ಎದುರಾಗುತ್ತಿದೆ.ಇದರ ಬಗ್ಗೆ ಕೇಂದ್ರ ಕಚೇರಿಯಿಂದ ಹಿಡಿದು ತಾಲೂಕು ಕಚೇರಿಯವರೆಗೂ ಹಲವು ಚಳುವಳಿ ಮತ್ತು ಹೋರಾಟ ನಡೆಸಿದರು ನೀವು ಒಳಗೊಂಡಂತೆ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ ರೀತಿ ಕಾರ್ಖಾನೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕಣ್ಮುಚ್ಚಿ ಕುಳಿತಿದ್ದೀರಿ ಇಂಥವರ ಮುಂದೆ ಹತ್ತಾರು ಚಳುವಳಿ ನಡೆಸಿದರು ಕೋಣನ ಮುಂದೆ ಕಿಂದರಿ ಬಾರಿಸಿದಂತಾಗಿದೆ. ಎಥೆನಾಲ್ ಘಟಕ ಆರಂಭದಿಂದ ಆಗುವ ಹಾನಿಯನ್ನು ಪರಿಶೀಲನೆ ಮಾಡುವ ಬದಲು ಕಾರ್ಖಾನೆಯ ಪರನಿಂತು ತನ್ನ ಕಾರ್ಯನೀತಿಗೆ ವಿರುದ್ದವಾಗಿ ಜನಭಿಪ್ರಾಯ ಸಭೆ ಕರೆದಿರುವುದು ಖಂಡನೀಯ. ಹಾಗಾಗಿ ಈ ದಿನವೇ ಪರಿಸರ ಇಲಾಖೆಯ ತೀರ್ಮಾನ ಏನು ಎನ್ನುವುದು ನಿಶ್ಚಯವಾಗಬೇಕು. ಶಾಶ್ವತವಾಗಿ ಇಂತಹ ಅಪಾಯಕಾರಿ ಘಟಕ ನಿರ್ಮಾಣವಿರಲಿ ಇದರ ಬಗ್ಗೆ ಚಿಂತನೆಯೂ ಕೂಡ ಮಾಡಬಾರದು ಎಂದು ಲಿಖಿತವಾಗಿ ನಮಗೆ ನೀಡಿದರೆ ಮಾತ್ರ ಈ ಶಾಂತಿಯುತ ಹೋರಾಟವನ್ನು ಹಿಂಪಡೆಯುತ್ತೇವೆ ಎಂದು ಎಚ್ಚರಿಸಿರುವ ರಾಜೇಗೌಡ ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಹೋರಾಟ ಮುಂದುವರಿಸಿದ್ದಾರೆ.