ಎತ್ತ ಹೋದವು ಎತ್ತಿನ ಗಾಡಿಗಳು ?

ಕಲಬುರಗಿ: ನಾಗರೀಕತೆಯ ನಾಗಾಲೋಟದಿಂದಾಗಿ ನಾಗರಿಕನ ಜೀವನ, ಜೀವನ ಶೈಲಿಯು ಬಹು ಬದಲಾಗಿದೆ. ಅಂದು ಸಾಮಾನ್ಯವಾಗಿ ಕಾಣಸಿಗುತ್ತಿದ್ದ ರೈತನ ಸಂಗಾತಿಯಾದ ಎತ್ತಿನಗಾಡಿಗಳು( ಬಂಡಿಗಳು) ಇಂದು ಉತ್ತರ ಕರ್ನಾಟಕದಲ್ಲಿ
ಕಾಣಸಿಗದೆ ನಿಧಾನವಾಗಿ ಕಣ್ಮರೆಯಾಗುತ್ತಿವೆ.
ಕಟ್ಟಿಗೆಯಿಂದ ತಯಾರಿಸಿದ ಎರಡು ಚಕ್ರದ ಗಾಡಿಯ ನೊಗಕ್ಕೆ ಹೆಗಲನ್ನು ಕೊಟ್ಟು ಎಳೆದು ಹೋಗುವ ಎತ್ತುಗಳ ಮುದ್ದಾದ ನಡಿಗೆಯನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿರುತ್ತಿತ್ತು.ಗಾಡಿಗಳ ಆಕಾರ, ವಿಸ್ತಾರ, ಉಪಯೋಗಗಳಲ್ಲಿ ವೈವಿಧ್ಯತೆ ಇರುತ್ತಿತ್ತು. ಕೆಲವರು ಗಾಡಿಯನ್ನು ಬೆರಗುಗೊಳಿಸುವ ಬಣ್ಣಗಳಿಂದ ಶೃಂಗಾರಗೊಳಿಸುತ್ತಿದ್ದರು.ಮತ್ತೆ ಕೆಲವರು ಗಾಡಿಯನ್ನು ಎಳೆಯುವ ಎತ್ತುಗಳ ಕೊರಳಿಗೆ ಗಂಟೆಗಳನ್ನು ಕಟ್ಟಿ, ಮೈಗೆ, ಕೊಂಬಿಗೆ ಎಣ್ಣೆ ಬಣ್ಣವನ್ನು ಹಚ್ಚಿ ಹರುಷ ಪಡುತ್ತಿದ್ದರು. ಎತ್ತಿನ ಗಾಡಿಗಳನ್ನು ಜೋಳ, ತೊಗರಿ, ಹತ್ತಿ,ಸೇಂಗಾದ ರಾಶಿ
ಮತ್ತು ಮೇವಾದ ಕಣಕಿ ಹೊಟ್ಟು ಮನೆಗೆ ತರಲು,ಮನೆ ಮಣ್ಣು ಕಲ್ಲು ಸಣ್ಣ ಸರಕು ಸಾಮಾನುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಬಳಸುತ್ತಿದ್ದರು.ದೂರದ ಊರಿಗೆ ಹೋಗಲು ಅದಕ್ಕೆ ಸವಾರಿ ತಟ್ಟಿ ಕಟ್ಟಿ,
ಅದರ ಮೇಲೆ ರಂಗುರಂಗಿನ ವಸ್ತ್ರ ಹೊದಿಸಿ ಅದರಲ್ಲಿ ಮೆತ್ತನೆಯ ಗಾದಿ ಹಾಸಿ ಇದನ್ನೇ ಬಳಸುತ್ತಿದ್ದರು.ಈಗ ಎಲ್ಲವೂ ಮರೆಯಾಗಿ ಕಬ್ಬಿಣದ ಗಾಡಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ .ಕಟ್ಟಿಗೆಗೆ ಹೋಲಿಸಿದರೆ ಬೆಲೆಯೂ ಕಡಿಮೆ.ಎತ್ತುಗಳಿಗೆ ಭಾರವೂ ಕಡಿಮೆಯಾಗಿದೆ. ಎತ್ತಿನ ಗಾಡಿಯ ಜಾಗಕ್ಕೆ ಕೈಗೆಟಕುವ ಬೆಲೆಯಲ್ಲಿ ಟ್ರ್ಯಾಕ್ಟರಗಳು ಬಂದಿವೆ.ಸಾಲ ನೀಡಲು ಬ್ಯಾಂಕುಗಳು ಮುಂದಾಗಿದ್ದು ಹೀಗಾಗಿ ಸಹಜವಾಗಿ ಎತ್ತಿನಬಂಡಿಗಳು ದಿನದಿಂದ ದಿನಕ್ಕೆ ತೆರೆಯಮರೆಗೆ ಸರಿಯುತ್ತಲಿವೆ.