ಎತ್ತು ಮಾರಾಟ ಆರೋಪ:ಗೋಶಾಲೆ ಮಾಲೀಕನ ವಿರುದ್ಧ ಪ್ರಕರಣ

ಕಲಬುರಗಿ,ಮೇ 22: ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪದಡಿ ವಶಕ್ಕೆ ಪಡೆದ ಎತ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಡಿ ಗೋಶಾಲೆ ಮಾಲೀಕನ ವಿರುದ್ಧ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸನಾಪುರದ ನಾಗರಾಜ ಅವರಿಗೆ ಸೇರಿದ ಎತ್ತುಗಳನ್ನು ನಂದಿ ಗೋಶಾಲೆ ಮಾಲೀಕ ಕೇಶವ ಮೋಟಗಿ ಅನುಮತಿ ಇಲ್ಲದೇ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗರಾಜ ಎತ್ತಿನ ವ್ಯಾಪಾರಿಯಾಗಿದ್ದು,ಆತನ ಸ್ನೇಹಿತ ಬಷಿರತ್ ಮಾರಾಟವಾಗದ ಎತ್ತುಗಳನ್ನು ಸರಕು ವಾಹನದಲ್ಲಿ ಮಳಖೇಡದಿಂದ ಸ್ವಗ್ರಾಮಕ್ಕೆ ತರುತ್ತಿದ್ದರು. ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪದಡಿ ವಾಡಿ ಠಾಣೆಯ ಪೊಲೀಸರು ಲಾಡ್ಲಾಪುರ ಬಳಿ ವಾಹನ ತಡೆದರು.ಬಷಿರತ್ ಬಳಿ ಎತ್ತುಗಳ ಖರೀದಿಯ ರಶೀದಿ ಇರದ ಕಾರಣ ,ಎರಡೂ ಎತ್ತುಗಳನ್ನು ವಶಕ್ಕೆ ಪಡೆದು ಅಳಂದ ರಸ್ತೆಯ ನಂದಿ ಗೋಶಾಲೆಯಲ್ಲಿ ಬಿಟ್ಟಿದ್ದರು.ನಾಗರಾಜ ಎತ್ತುಗಳನ್ನು ನ್ಯಾಯಾಲಯದ ಮೂಲಕ ಬಿಡಿಸಿಕೊಳ್ಳುವ ಮುನ್ನವೇ, ಕೇಶವ ಮೋಟಗಿ ನ್ಯಾಯಾಲಯದ ಅನುಮತಿ ಪಡೆಯದೇ ಎತ್ತುಗಳ ಮಾಲೀಕನಿಗೂ ತಿಳಿಸದೇ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.