ಎತ್ತಿನ ಹೊಳೆ ಯೋಜನೆ ಶೀಘ್ರ ಅನುಷ್ಠಾನ

ವಿಜಯಪುರ, ಏ. ೧೩- ಬಿಜೆಪಿ ಪಕ್ಷದ ಹಲವಾರು ಎಡವಟ್ಟುಗಳಿಂದ ಎತ್ತಿನ ಹೊಳೆ ಯೋಜನೆ ತಡವಾಗಿದ್ದು, ಇದೀಗ ಯೋಜನೆ ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರನ್ನು ಹರಿಸಲಾಗುವುದೆಂದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಹೇಳಿದರು.
ಅವರು ಪಟ್ಟಣದ ಪ್ರಗತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಸಂವಿಧಾನ ಗಂಡಾಂತರದಲ್ಲಿದೆ. ಅದನ್ನು ಉಳಿಸುವ ಮೂಲಕ ಈ ದೇಶದ ಪ್ರತಿಯೊಬ್ಬ ಭಾರತೀಯರನ್ನು ರಕ್ಷಣೆ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ೧೦ ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ, ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಸ್ಥಾಪನೆ ಮಾಡಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ನಿರುದ್ಯೋಗದ ಸಮಸ್ಯೆಯನ್ನು ಜಾಸ್ತಿ ಮಾಡಿದೆ. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನವನ್ನು ಬದಲಾವಣೆ ಮಾಡಲು ಸಿದ್ಧತೆಗಳು ಮಾಡಿಕೊಂಡಿದ್ದಾರೆ. ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆಯ ಪಾಲಿಗಾಗಿ ನಾವು ಸುಫ್ರೀಂಕೋರ್ಟ್ ಗೆ ನ್ಯಾಯಕ್ಕಾಗಿ ಹೋಗಬೇಕಾಗಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದಿಂದ ೨೫ ಮಂದಿ ಬಿಜೆಪಿ ಸಂಸದರನ್ನು ಜನರು ಆಯ್ಕೆ ಮಾಡಿದರು. ಆದರೆ, ಅವರೆಲ್ಲರೂ ಪ್ರಧಾನಿಯ ಮುಂದೆ ತುಟಿಬಿಚ್ಚಲಿಲ್ಲ. ರಾಜ್ಯಕ್ಕೆ ಬರಬೇಕಾಗಿರುವ ಅನುದಾನಗಳನ್ನು ತರಲಿಲ್ಲ. ಮುಂದಿನ ಚುನಾವಣೆಯಲ್ಲಿ ೨೮ ಸ್ಥಾನಗಳ ಪೈಕಿ ೨೦ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ನಾವು ಮಾನವಧರ್ಮ, ಪ್ರಜಾಪ್ರಭುತ್ವ, ಸಂವಿಧಾನದಡಿಯಲ್ಲಿ ಸಾಮಾಜಿಕ ನ್ಯಾಯ ಕೊಡಲು ರಾಜಕೀಯ ಮಾಡುತ್ತೇವೆ ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು, ರಕ್ಷಾರಾಮಯ್ಯ ಆಗಿ ಕೆಲಸ ಮಾಡಬೇಕು ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು, ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಸ್ವಾಮೀಜಿ ಅವರನ್ನು ನಾವೂ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೇವೆ. ಅದೇ ರೀತಿ ಅವರೂ ಹೋಗಿದ್ದಾರೆ. ಮತದಾರರು ಅಂತಿಮವಾಗಿ ನಿರ್ಣಯ ಮಾಡುತ್ತಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು, ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗುವಂತೆ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕು ಎಂದರು.
ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ೧೦ ವರ್ಷಗಳ ಕಾಲ ಆಡಳಿತ ನಡೆಸಿದ ಪ್ರಧಾನಿ ನರೇಂದ್ರಮೋದಿ ಅವರು, ಒಂದು ಬಾರಿಯೂ ಮಾಧ್ಯಮಗಳ ಮುಂದೆ ಧೈರ್ಯವಾಗಿ ಮಾತನಾಡಲಿಲ್ಲ, ಚುನಾವಣಾ ಬಾಂಡ್ ಗಳಲ್ಲಿ ಬಿಜೆಪಿ ೬ ಸಾವಿರ ಕೋಟಿ ದೇಣಿಗೆ ಪಡೆದುಕೊಂಡಿದೆ. ಸೋಲಿನ ಭೀತಿಯಲ್ಲಿ ಬಿಜೆಪಿ, ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ. ಕೇವಲ ೧೦ ವರ್ಷಗಳಲ್ಲಿ ಈ ದೇಶದ ಚಿತ್ರಣ ಬದಲಾವಣೆ ಮಾಡಲು ಸಾಧ್ಯವೇ? ಮೋದಿಯವರ ಸುಳ್ಳು ಮಾತುಗಳಿಗೆ ಮರುಳಾಗದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ವಿಜಯಪುರ ಪಟ್ಟಣದಲ್ಲಿ ೧೦ ಸಾವಿರ ಮತಗಳ ಮುನ್ನಡೆ ಕೊಡಬೇಕು ಎಂದರು.
ಪುರಸಭಾ ಮಾಜಿ ಸದಸ್ಯರಾದ ಸಂಪತ್ ಕುಮಾರ್, ಎಂ.ವೀರಣ್ಣಗೌಡ, ಮುನಿಚಿನ್ನಪ್ಪ, ಸಂಪತ್, ಕೆ.ಎಂ.ಮಧು, ಮಹೇಶ್, ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್, ಬಲಿಜ ಸಂಘದ ಅಧ್ಯಕ್ಷ ಮುನಿರಾಜು, ಆರ್.ಮುನಿರಾಜು, ಹರೀಶ್, ಮುನಿಕೃಷ್ಣಪ್ಪ, ಮರವೇ ಕೆಂಪಣ್ಣ, ಮುಂತಾದವರು ಹಾಜರಿದ್ದರು.