ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ತೆರೆದ ಮನೆ ಕಾರ್ಯಕ್ರಮ
ಮಾದಕ ವಸ್ತುಗಳಿಂದ ದೂರವಿರಿ:ನ್ಯಾ.ಸತೀಶ್ ಬಾಳೆ


ಬಳ್ಳಾರಿ,ಸೆ.22: ಮಕ್ಕಳು ಮತ್ತು ಯುವಕರು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ಅವುಗಳಿಂದ ದೂರವಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ್ ಬಾಳೆ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಡ್-ಚೈಲ್ಡ್‍ಲೈನ್ ನೋಡಲ್ ಸಂಸ್ಥೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿ ಸಂಯುಕ್ತಾಶ್ರಯಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮಕ್ಕಳ ಸಮಸ್ಯೆಗಳನ್ನು ಚರ್ಚಿಸಲು ಶಾಲಾ ಮಕ್ಕಳಿಗೆ ತಾಲೂಕಿನ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಬುಧವಾರದಂದು ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲಕಾರ್ಮಿಕತೆ, ಬಾಲ್ಯವಿವಾಹ ಮತ್ತು ಭಿಕ್ಷಾಟನೆಯಂತಹ ಕೃತ್ಯಗಳಿಗೆ ಯಾರು ಬೆಂಬಲ ನೀಡಬಾರದು. ಇಂತಹ ಕೃತ್ಯಗಳ ಕುರಿತು ಯಾರಿಗಾದರೂ ಮಾಹಿತಿ ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ತಿಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಡಿಡಿಎಸ್ ಚೈಲ್ಡ್‍ಲೈನ್(1098) ಕೇಂದ್ರ ಸಂಸ್ಥೆಯ ನಿರ್ದೇಶಕರಾದ ಫಾದರ್ ಯಾಗಪ್ಪ ಅವರು ಮಾತನಾಡಿ, ಎಲ್ಲಾ ಮಕ್ಕಳು ಉತ್ತಮ ಗುಣಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಕನಸು ಮತ್ತು ಗುರಿಯನ್ನು ಹೊಂದಿ ಇದರ ಸಾಕಾರಕ್ಕಾಗಿ ಸತತ ಪ್ರಯತ್ನ ಪಡಬೇಕು ಎಂದು ಹೇಳಿದರು.
ಮಕ್ಕಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಯಿದ್ದಲ್ಲಿ ತಕ್ಷಣವೇ 1098ಗೆ ಕರೆ ಮಾಡಿ ತಿಳಿಸಬೇಕು ಎಂದು ಮಾಹಿತಿ ನೀಡಿದರು.
ಚೈಲ್ಡ್‍ಲೈನ್ ಕೇಂದ್ರದ ನೋಡಲ್ ಸಂಯೋಜಕರಾದ ಮಂಜುನಾಥ್ ಅವರು ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ದೂರವಾಣಿ ಸಂಖ್ಯೆ 1098ಯನ್ನು ಮಕ್ಕಳ ಸಹಾಯವಾಣಿಯಲ್ಲಿ ಸ್ಥಾಪಿಸಲಾಗಿದೆ. ನಮ್ಮ ದೇಶದಲ್ಲಿ ಒಟ್ಟು 602 ಜಿಲ್ಲೆಗಳಲ್ಲಿ ಮತ್ತು 144 ರೈಲ್ವೇ ನಿಲ್ಧಾಣಗಳಲ್ಲಿ ಮಕ್ಕಳ ಸಹಾಯವಾಣಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ನಿಮ್ಮ ಗ್ರಾಮದಲ್ಲಿ ತೊಂದರೆ ಹಾಗೂ ಸಂಕಷ್ಟದಲ್ಲಿ ಇರುವ ಮಕ್ಕಳು ಕಂಡು ಬಂದಲ್ಲಿ 1098ಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದರು. ಇಂತಹ ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರಿಕೆ, ವೈದ್ಯಕೀಯ ಸೌಲಭ್ಯ, ಆಶ್ರಯ ಮತ್ತು ರಕ್ಷಣೆಯಂತಹ ಸೇವೆಗಳನ್ನು ಮಕ್ಕಳ ಸಹಾಯವಾಣಿ ಕೇಂದ್ರದಿಂದ ಒದಗಿಸಲಾಗುವುದು, ಇದರ ಸದಪಯೋಗವನ್ನು ಎಲ್ಲರು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚೈಲ್ಡ್‍ಲೈನ್ ಸಂಯೋಜಕರಾದ ಆನಂದ, ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ರಾಜನಾಯಕ್, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮಂಜುನಾಥ ಸ್ವಾಮಿ, ಎಸ್‍ಜೆಪಿಯು ಪೊಲೀಸ್ ಘಟಕದ ಸಿಬ್ಬಂದಿ ಲಲಿತಮ್ಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಅಧಿಕಾರಿ ಈಶ್ವರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಚಿತ್ರ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ಪ್ರಭಾಕರ್, ಉಪಾಧ್ಯಕ್ಷರಾದ ಶಿವರಾಜ್‍ಗೌಡ, ಕಾರ್ಯದರ್ಶಿ ಉದ್ದನಗೌಡ, ಗ್ರಾಮಾಂತರ ಠಾಣೆಯ ಎಎಸ್‍ಐ ಪೀರಾಸಾಬ್, ಸಿಆರ್‍ಪಿ ವಿಜಯ್‍ಕುಮಾರ್, ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.