ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಪ್ರಕರಣ6 ದಿನಗಳ ಅಂತರದಲ್ಲಿ ಮೂವರ ಸಾವು

ಮಹೇಶ್ ಕುಲಕರ್ಣಿ

ಕಲಬುರಗಿ:ನ.8: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಶವಸಂಸ್ಕಾರ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಮೂವರು ಬೈಕ್ ಸವಾರರು ಆರು ದಿನಗಳ ಅಂತರದಲ್ಲಿ ಒಬ್ಬರಾದ ನಂತರ ಒಬ್ಬರು ಸಾವನ್ನಪ್ಪಿದ ಘಟನೆ ವಾಡಿ (ಜಂ) ಪುರಸಭೆ ವ್ಯಾಪ್ತಿಯ ವಾರ್ಡ್-1ರಲ್ಲಿ ನಡೆದಿದೆ.

ಅಕ್ಟೋಬರ್ 30ರಂದು ಸಂಜೆ 6ಕ್ಕೆ ವಾಡಿ ಸಮೀಪದ ಬಲರಾಂ ಚೌಕ ಹಾಗೂ ಸುಣ್ಣದ ಭಟ್ಟಿ ಮಧ್ಯೆ ಎದುರಿನಿಂದ ಬರುತ್ತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಬೈಕ್ ಚಾಲನೆ ಮಾಡುತ್ತಿದ್ದ ದುರ್ಗಪ್ಪ ತಿಮ್ಮಯ್ಯ (50) ಶಹಾಬಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈತನೊಂದಿಗೆ ಬೈಕ್ ಮೇಲೆ ಹೊರಟಿದ್ದ ಸತ್ಯವ್ವ ಹಾಗೂ ಆಕೆಯ ಪತಿ ದುರ್ಗಪ್ಪ ಗಾಯಗೊಂಡಿದ್ದರು. ಘಟನೆಯ ಬೆನ್ನಲ್ಲಿಯೇ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಂಪತಿಯ ಪೈಕಿ ಸತ್ಯವ್ವ ಗಂಡ ದುರ್ಗಪ್ಪ ಸಾಧು (55) ಒಳಪೆಟ್ಟುಗಳಿಂದ ಚೇತರಿಸಿಕೊಳ್ಳಲಾಗದೆ ನವೆಂಬರ್ 3ರಂದು ಸಾವನ್ನಪ್ಪಿದ್ದರು. ಇದಾದ ಬಳಿಕ ಇದೇ ಅಪಘಾತದಿಂದ ಅಸ್ವಸ್ಥಗೊಂಡಿದ್ದ ದುರ್ಗಪ್ಪ ಸಾಧು ತಂದೆ ಕಾಮಣ್ಣ (65) ಸಹ ನವೆಂಬರ್ 6ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ, ಅಪಘಾತದಿಂದಾಗಿ ಮೂವರು ಸಾವನ್ನಪ್ಪಿದಂತಾಗಿದೆ.

ಘಟನೆಯ ಹಿನ್ನೆಲೆ:

ಅಕ್ಟೋಬರ್ 30ರಂದು ಸೇಡಂ ತಾಲೂಕಿನ ಸಿಂಗಲಮಡಗು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ದುರ್ಗಪ್ಪ ಸಾಧು ಹಾಗೂ ಆತನ ಪತ್ನಿ ಸತ್ಯವ್ವ ಸಿಂಗಲಮಡಗು ಗ್ರಾಮಕ್ಕೆ ತೆರಳಿದ್ದರು. ಈ ದಂಪತಿಯ ಸಂಬಂಧಿಕ ದುರ್ಗಪ್ಪ ತಿಮ್ಮಯ್ಯ ಎಂಬಾತ ಶಹಾಬಾದ್ ಪಟ್ಟಣದಿಂದ ಇದೇ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ. ಸಂಜೆ ಹೊತ್ತಿನಲ್ಲಿ ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕಾಗಿ ದುರ್ಗಪ್ಪ ತಿಮ್ಮಯ್ಯ ತನ್ನ ಬೈಕ್ ಮೇಲೆ ದುರ್ಗಪ್ಪ ಸಾಧು ಹಾಗೂ ಆತನ ಪತ್ನಿ ಸತ್ಯವ್ವಳನ್ನು ಬಲರಾಂ ಚೌಕ ಸಮೀಪದ ವಾರ್ಡ್-1ಕ್ಕೆ ತಲುಪಿಸಲು ಮುಂದಾಗಿದ್ದ. ದುರಂತವೆಂದರೆ, ಮನೆಯಿಂದ ಕೇವಲ ಒಂದೆರಡು ಕಿ.ಮೀ ಅಂತರದಲ್ಲಿಯೇ ಅಪಘಾತ ಸಂಭವಿಸಿದ ಕಾರಣ ದಂಪತಿಯನ್ನು ಡ್ರಾಪ್ ಮಾಡಲು ಬಂದಿದ್ದ ದುರ್ಗಪ್ಪ ತಿಮ್ಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ. ಘಟನೆ ಸಂಭವಿಸಿದ ಆರು ದಿನಗಳ ಅಂತರದಲ್ಲಿ ದಂಪತಿಗಳಾದ ದುರ್ಗಪ್ಪ ಸಾಧು ಮತ್ತು ಸತ್ಯವ್ವ ದುರ್ಗಪ್ಪ ಸಹ ಸಾವನ್ನಪ್ಪಿದ್ದಾರೆ.

==

ಕಂಗಾಲಾದ ಕುಟುಂಬ

ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿರುವ ದುರ್ಗಪ್ಪ ಸಾಧು -ಸತ್ಯವ್ವ ದಂಪತಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದು, ಮನೆ ಕಟ್ಟುವ (ಗೌಂಡಿ) ಕೆಲಸ ಮಾಡಿಕೊಂಡು ದುರ್ಗಪ್ಪ ಸಾಧು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಎಲ್ಲ ಮೂರೂ ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಇಬ್ಬರು ಪುತ್ರರೊಂದಿಗೆ ದಂಪತಿ ಕಾಲ ಕಳೆಯುತ್ತಿದ್ದರು. ಅಪಘಾತದ ರೂಪದಲ್ಲಿ ಕುಟುಂಬದ ಮೇಲೆ ಸಾವಿನ ಛಾಯೆ ದಿಢೀರನೆ ಆವರಿಸಿಕೊಂಡಿದ್ದರಿಂದ ದುರ್ಗಪ್ಪ ಸಾಧು ಅವರ ಸಂತ್ರಸ್ತ ಕುಟುಂಬ ಆತಂಕಕ್ಕೆ ಒಳಗಾಗಿದೆ.

==
ವಾಡಿ ಪಟ್ಟಣಕ್ಕೆ ನಾಳೆ ನಾನು ಭೇಟಿ ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ದುರ್ಗಪ್ಪ ಸಾಧು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಅವರ ಕುಟುಂಬಕ್ಕೂ ಭೇಟಿ ಕೊಡುತ್ತಿರುವೆ.

-ಪ್ರಿಯಾಂಕ್ ಖರ್ಗೆ, ಶಾಸಕರು, ಚಿತ್ತಾಪುರ