ಎತ್ತಿನ ಗಾಡಿಗೆ ಸ್ಕೂಟಿ ಡಿಕ್ಕಿ: ಆರೋಗ್ಯ ಅಧಿಕಾರಿ ಸಾವು

ಕಲಬುರಗಿ:ಮಾ.26:ಕರ್ತವ್ಯ ನಿರ್ವಹಿಸಿ ಮನೆಗೆ ಮರಳುವಾಗ ರಸ್ತೆ ಅಪಘಾತದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿನ ಬೇಲೂರ್ ಕ್ರಾಸ್ ಮದರ್ ತೆರೆಸ್ಸಾ ಆಸ್ಪತ್ರೆಯ ಹತ್ತಿರ ವರದಿಯಾಗಿದೆ.
ಮೃತಳನ್ನು ಕುಮಾರಿ ಕನ್ಯಾಕುಮಾರಿ (27) ಎಂದು ಗುರುತಿಸಲಾಗಿದೆ. ಯುವತಿಯು ಕಮಲಾಪೂರ ತಾಲ್ಲೂಕಿನ ಕಿಣ್ಣಿ ಸಡಕ್ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೂಲತ: ಚಿತ್ತಾಪುರ ತಾಲ್ಲೂಕಿನ ಸಾತನೂರ್ ಗ್ರಾಮದ ನಿವಾಸಿ ಕನ್ಯಾಕುಮಾರಿ ಅವರು ಎಂದಿನಂತೆ ಕರ್ತವ್ಯ ನಿರ್ವಹಿಸಿ ಸ್ಕೂಟಿ ಮೇಲೆ ನಗರಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಗ್ರಾಮೀಣ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪುತ್ರಿಯ ಸಾವಿನ ಸುದ್ದಿ ತಿಳಿದ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಪೋಷಕರು ಹಾಗೂ ಆರೋಗ್ಯ ಇಲಾಖೆಯ ನೌಕರರು ಮೃತಳ ಶವದೊಂದಿಗೆ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯ ಮುಂದೆಯೇ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಜಿಲ್ಲಾಧಿಕಾರಿಗಳ ಆದೇಶದೊಂದಿಗೆ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ್ ಮಾಲಿ, ಕೋವಿಡ್ ನಿಯಂತ್ರಣದ ನೋಡಲ್ ಅಧಿಕಾರಿಗಳೂ ಆಗಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಸಂಗಾ ಅವರು ಪ್ರತಿಭಟನೆಕಾರರೊಂದಿಗೆ ಮಾತುಕತೆಯನ್ನು ಇದೇ ಸಂದರ್ಭದಲ್ಲಿ ಮಾಡಿದರು. ಅಂತ್ಯಸಂಸ್ಕಾರಕ್ಕೆ 15000ರೂ.ಗಳನ್ನು ಹಾಗೂ ಇತರೆ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.