ಎತ್ತಿನಹೊಳೆ-ಹೇಮಾವತಿ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ

ಕೊರಟಗೆರೆ, ಜು. ೧೩- ತಾಲ್ಲೂಕಿನಲ್ಲಿ ಹರಿಯುವ ಜಯಮಂಗಲಿ, ಸುವರ್ಣಮುಖಿ ಹಾಗೂ ಗರುಡಾಚಲ ನದಿಗಳು ಹಿಂದೆ ಜೀವನದಿನಗಳಾಗಿ ಹರಿಯುತ್ತಿದ್ದು, ಆ ನದಿಗಳಲ್ಲಿ ಇತ್ತೀಚೆಗೆ ಸೀಮೆ ಜಾಲಿ ಬೆಳೆದು ಒಣ ನದಿಗಳಾಗಿರುವ ೩ ನದಿಗಳನ್ನು ಜೀವಂತ ನದಿಗಳನ್ನಾಗಿಸಿ ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಹೇಮಾವತಿ ಯೋಜನೆಗಳ ಅನುಷ್ಠಾನ ಜಾರಿಗೆ ಹೋರಾಟ ನಡೆಸುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಜಯಮಂಗಲಿ, ಸುವರ್ಣಮುಖಿ ಹಾಗೂ ಗುರುಡಾಚಲ ನದಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ಶಕ್ತಿ ಪೀಠ ಫೌಂಡೇಷನ್ ಮತ್ತು ಯುವ ಬ್ರಿಗೇಡ್, ಗ್ರಾಮೀಣ ಆರ್ಥಿಕ ಕೃಷಿ ಅಭಿವೃಧ್ದಿ ಸಂಸ್ಥೆ, ರೈತ ಮಹಿಳಾ ಘಟಕ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಸಂಘದ ಸಹಯೋಗದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಅಂತರ್ಜಲ ಮತ್ತು ನದಿ ನೀರು ಅಭಿವೃಧ್ದಿ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ೩೦ ವರ್ಷಗಳಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರು ಪ್ಲೋರೆಡ್‌ನಿಂದ ಕಲುಷಿತವಾಗಿ ಜನತೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದು ಈ ಸಮಸ್ಯೆಯಿಂದ ಮುಕ್ತಿಯಾಗಲು ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಮತ್ತು ಬೆಳೆ ಬೆಳೆಯಲು ನೀರು ಅವಶ್ಯಕತೆ ಇರುವುದುರಿಂದ ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳಾದ ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ತಾಲ್ಲೂಕಿನ ಮುಖ್ಯ ೩ ನದಿಗಳಾದ ಜಯಮಂಗಲಿ, ಸುವರ್ಣಮುಖಿ ಹಾಗೂ ಗರುಡಾಚಲ ನದಿಗಳಿಗೆ ಹಾಗೂ ತಾಲ್ಲೂಕಿನ ೧೦೯ ಕೆರೆಗಳಿಗೆ ನೀರು ಹರಿಸುವ ಮೂಲಕ ಅಂತರ್ಜಲ ವೃದ್ದಿಗೆ ಹೆಚ್ಚು ಒತ್ತು ನೀಡಿ ಮುಂದಿನ ಯುವ ಪೀಳಿಗೆಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಪಕ್ಷಾತೀತವಾಗಿ ಶಾಶ್ವತ ನೀರಾವರಿ ಯೋಜನೆಗೆ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಯ ಬೈರಗೊಂಡ್ಲು ಬಳಿಯ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಷರ್ ಡ್ಯಾಂ ಸ್ಥಳಾಂತರ ಹುನ್ನಾರ ವಿರೋಧಿಸಿ ಬೈರಗೊಂಡ್ಲು ಗ್ರಾಮದಲ್ಲೆ ಡ್ಯಾಂ ನಿರ್ಮಾಣಕ್ಕೆ ಒತ್ತಾಯಿಸಿ ಹೋರಾಟ ಮಾಡಲು ಕೈಜೋಡಿಸುವಂತೆ ಮನವಿ ಮಾಡಿದರು.
ರಾಜ್ಯ ನದಿ ಜೋಡಣೆ ಸಂಸ್ಥೆ ಸದಸ್ಯ ಹಾಗೂ ನೀರಾವರಿ ತಜ್ಞ ಕುಂದರನಳ್ಳಿ ರಮೇಶ್ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರ ಮೇಲ್ದಂಡೆ ಯೋಜನೆ ಅನುಷ್ಠಾನ ಇಚ್ಚಾಶಕ್ತಿ ಇಲ್ಲದೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನೀರು ಹರಿಸಲು ವಿಫಲವಾಗುತ್ತಿದ್ದು ಕೆಲವೇ ತಾಲ್ಲೂಕುಗಳಿಗೆ ನೀರು ಹರಿಯುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನೀರು ಹರಿಸುವ ಯೋಜನೆ ಮುನ್ನಾ ನೀರಾವರಿ ತಜ್ಞರ ಅಧ್ಯಯನ ಅವಶ್ಯಕವಾಗಿದ್ದು, ಪ್ರಸ್ತುತ ಕೆಲ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಅವೈಜ್ಞಾನಿಕವಾಗಿದ್ದು ಕೊರಟಗೆರೆ, ಮಧುಗಿರಿ ಸೇರಿದಂತೆ ಇನ್ನಿತರ ತಾಲ್ಲೂಕುಗಳಿಗೆ ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನವಾಗಬೇಕಾದರೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಾದರೆ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಸೇರ್ಪಡೆ ಮಾಡಬೇಕು ಎಂದರು.
ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಳಿ ನಿರ್ಮಾಣ ಮಾಡಲು ಉದ್ದೇಶವಿದ್ದ ಬಫರ್ ಡ್ಯಾಂ ನಿರ್ಮಾಣ ಸ್ಥಳಾಂತರದ ಹುನ್ನಾರ ನಡೆಯುತ್ತಿದ್ದು ಬೈರಗೊಂಡ್ಲುವಿನಲ್ಲೆ ಡ್ಯಾಂ ನಿರ್ಮಾಣಕ್ಕೆ ತಾಲ್ಲೂಕಿನ ಎಲ್ಲ ರೈತರ ಹೋರಾಟ ಅನಿವಾರ್ಯ ಎಂದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಮಾತನಾಡಿ, ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯ ಅನಿಷ್ಠಾನಕ್ಕೆ ಇಲಾಖೆಯಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ನೀರಿನ ಹಂಚಿಕೆ ಇಲ್ಲದೆ ಯೋಜನೆ ಅನುಷ್ಠನ ಸಾಧ್ಯವಿಲ್ಲ. ಕೊರಟಗೆರೆ ಮತ್ತು ಮಧುಗಿರಿ, ಪಾವಗಡ ತಾಲ್ಲೂಕುಗಳಿಗೆ ಯೋಜನೆಯಲ್ಲಿ ನೀರು ಹರಿಸಲು ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು ತಾಂತ್ರಿಕ ಇಲಾಖೆ ವರದಿಯಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನೀರು ಹಂಚಿಕೆ ಮಾಡಲಾಗುವುದು. ಜಿಲ್ಲೆಗೆ ಪ್ರಸ್ತುತ ೧೫ ಟಿ.ಎಂ.ಸಿ ನೀರು ಹಂಚಿಕೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ.ಹೆಚ್.ಅನಿಲ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯರಿಗೂ ಶುದ್ದ ಕುಡಿಯುವ ನೀರು ಮತ್ತು ಆಹಾರದ ಅವಶ್ಯಕೆತೆ ಇದ್ದು ನೀರು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಪರಿಸರ ರಕ್ಷಣೆಯೊಂದಿಗೆ ಅಂತರ್ಜಲ ವೃದ್ದಿಗೆ ಶ್ರಮಿಸಬೇಕಾಗಿದೆ. ತುಮಕೂರು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಮಗ್ರ ನೀರಾವರಿ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ಸಣ್ಣ ನೀರಾವರಿ ಇಲಾಖೆ ಮೂಲಕ ಕುಡಿಯಲು ಮತ್ತು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಅನುಷ್ಠಾನಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವೇದಮೂರ್ತಿ, ಪ.ಪಂ.ಸ್ಥಾಯ ಸಮಿತಿ ಅಧ್ಯಕ್ಷ ನಟರಾಜು, ಸದಸ್ಯ ಪ್ರದೀಪ್‌ಕುಮಾರ್, ನೀರಾವರಿ ಸಮಿತಿ ಸದಸ್ಯರಾದ ಲೋಕೇಶ್, ದಾಡಿವೆಂಟೇಶ್, ಶಿವಾನಂದ, ಸಂಜೀವರೆಡ್ಡಿ, ರವಿಕುಮಾರ್, ಸಿ.ಎಸ್.ಹನುಮಂತರಾಜು, ಲಕ್ಷ್ಮಿಕಾಂತ, ಸುಬ್ಬರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.