ಬೆಂಗಳೂರು, ಮಾ.೨೮-ಎತ್ತಿನ ಹೊಳೆ ಯೋಜನೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎರಡು ದೂರು ದಾಖಲಿಸಿದ್ದಾರೆ.
ನಗರದಲ್ಲಿಂದು ದಾಖಲೆ ಸಮೇತ ಕರ್ನಾಟಕ ಲೋಕಾಯಕ್ತ ಕಚೇರಿಗೆ ಆಗಮಿಸಿದ ರಮೇಶ್ ಅವರು ಶಾಸಕ ಶಿವಲಿಂಗೇಗೌಡ ಅವರು ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಎತ್ತಿನ ಹೊಳೆ ಯೋಜನೆಯ ಕಾನ್ವರ್ಜೇನ್ಸಿ ಹೆಸರಿನಲ್ಲಿ ೧೫೦ ಕೋಟಿ ರೂ. ಗಳಿಗೂ ಹೆಚ್ಚು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ಶಿವಲಿಂಗೇಗೌಡ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ತುಮಕೂರು ವಿಭಾಗದ ಮುಖ್ಯ ಅಭಿಯಂತರ ಮಾಧರ್, ಅಧೀಕ್ಷಕ ಅಭಿಯಂತರ ಆನಂದ್ ಕುಮಾರ್, ಹಾಸನ ವಿಭಾಗದ ಕಾರ್ಯಪಾಲಕ ಅಭಿಯಂತರ ರಘುನಾಥ್, ಅರಸೀಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಘು, ಕೆಆರ್ ಐಡಿಎಲ್ ಸಂಸ್ಥೆಯ ಹಾಸನ ವಿಭಾಗದ ಕಾರ್ಯಪಾಲಕ ಅಭಿಯಂತರ ಸಿದ್ದಪ್ಪ, ಅರಸೀಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯ, ಸಹಾಯಕ ಅಭಿಯಂತರ ದೀಕ್ಷಿತ್, ಪಂಚಾಯತ್ ರಾಜ್ ಇಲಾಖೆಯ ಅರಸೀಕೆರೆ ವಿಭಾಗದ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜು ಮತ್ತು ಕಿರಿಯ ಅಭಿಯಂತರ ಉಮೇಶ್ ಸೇರಿದಂತೆ ಇತರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರುಗಳು ದಾಖಲಿಸಿರುವುದಾಗಿ ಉಲ್ಲೇಖಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಟಿಟಿಪಿ ಕಾಯ್ದೆಯ ಪ್ರಕಾರ ೧ ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಈ ಪ್ರೋಕ್ಯೂರ್‍ಮೆಂಟ್ ವಿಧಾನದಲ್ಲಿ ಟೆಂಡರ್ ಗಳನ್ನು ಆಹ್ವಾನಿಸಿ ನಿಯಮಾನುಸಾರ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿಗಳ ನಿರ್ವಹಣೆಯ ಗುತ್ತಿಗೆಯನ್ನು ನೀಡಬೇಕಿರುತ್ತದೆ.
ಆದರೆ, ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಒಂದು ಕೋಟಿಯಿಂದ ಐದು ಕೋಟಿ ರೂಪಾಯಿಗಳ ವರೆಗಿನ ಎಲ್ಲಾ ಕಾಮಗಾರಿಗಳನ್ನು ನಿಯಮಾನುಸಾರ ಟೆಂಡರ್ ಕರೆಯದೆ ಕೆಆರ್ ಐಡಿಎಲ್ ಸಂಸ್ಥೆಯ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.
ಅದರಲ್ಲೂ ಪ್ರಮುಖವಾಗಿ ಎಸ್‌ಸಿ ಎಸ್ಟಿ ಯೋಜನೆಗಳನ್ನು ಆಯಾ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲೇ ಮಾಡಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ.
ಬಿಡುಗಡೆಯಾಗುವ ಅನುದಾನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಲುವಾಗಿಯೇ, ನಿಯಮಾನುಸಾರ ಟೆಂಡರ್ ಕರೆಯದೇ ನೇರವಾಗಿ ಕೆಆರ್ ಐಡಿಎಲ್ ಸಂಸ್ಥೆಗೆ ಕಾಮಗಾರಿಗಳ ನಿರ್ವಹಣೆಯ ಕಾರ್ಯವನ್ನು ವಹಿಸಲಾಗುವ ಸತ್ಯ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ರುಜುವಾತಾಗಿರುತ್ತದೆ.
ನರೇಗಾ ಮೂಲಕ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಅನುದಾನ ಮತ್ತು ಲೆಕ್ಕ ಶೀರ್ಷಿಕೆ ೫೦೫೪ ರ ಅಡಿಯಲ್ಲಿ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ವಿವೇಚನೆಯ ಅನುದಾನದ ಮೂಲಕ ಬಿಡುಗಡೆಯಾಗುವ ಅನುದಾನಗಳನ್ನು ಒಗ್ಗೂಡಿಸಿ ಕಾನ್ವರ್ಜೇನ್ಸಿ ಹೆಸರಿನಲ್ಲಿ ಪ್ರೆಡ್ ಮೂಲಕ ತಮಗಿಷ್ಟ ಬಂದ ಹಾಗೆ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೦೧೮-೨೦೨೩ ರ ಅವಧಿಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳನ್ನು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ನರೇಗಾ ಯೋಜನೆಯ ಅನುಷ್ಠಾನಕ್ಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಬಿಡುಗಡೆಯಾಗಿರುವ ೧೫೦ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಅನುದಾನಗಳ ಪೈಕಿ, ಶೇ.೫೦ರಷ್ಟುಕ್ಕೂ ಹೆಚ್ಚು ಹಣವನ್ನು ಶಾಸಕ ಶಿವಲಿಂಗೇಗೌಡರು ಪ್ರೆಡ್‌ನಲ್ಲಿರುವ ತಮ್ಮ ಆಪ್ತ ಮತ್ತು ವಂಚಕ ಅಧಿಕಾರಿಗಳ ಸಹಕಾರದಿಂದ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿರುವುದರಿಂದ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ರಮೇಶ್ ಸರ್ಕಾರವನ್ನು ಒತ್ತಾಯಿಸಿದರು.