
ಚಿಕ್ಕಮಗಳೂರು,ಅ.೪- ರಾಜ್ಯದಲ್ಲಿ ಮಳೆಯ ಪ್ರಮಾಣ ಬಹುತೇಕ ತಗ್ಗಿದ್ದರೂ ಜಿಲ್ಲೆಯ ಪಶ್ಚಿಮಘಟ್ಟ ಭಾಗದಲ್ಲಿ ಮಳೆಯಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಗುಡ್ಡ ಕುಸಿತ, ಮರಗಳು ಬೀಳುವುದು ಇನ್ನೂ ನಿಂತಿಲ್ಲ. ಹೀಗಾಗಿ ಮುದಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ನಿಷೇಧ ಹೇರಿದೆ.
ಎತ್ತಿನಭುಜ ಪ್ರವಾಸಿ ತಾಣಕ್ಕೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಟ್ರಕ್ಕಿಂಗ್ ಹೋಗಲು ಉತ್ತಮ ಸ್ಥಳವಾಗಿರುವುದರಿಂದ, ಪ್ರತಿದಿನ ನೂರಾರು ಜನರು ಟ್ರೆಕ್ಕಿಂಗ್‌ಗೆ ಹೋಗುತ್ತಾರೆ. ಆದರೆ, ಕಳೆದ ೧೫ ದಿನಗಳಿಂದ ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಅಲ್ಲೊಂದು ಇಲ್ಲೊಂದು ಗುಡ್ಡಗಳು ಕುಸಿಯುತ್ತಿವೆ. ವಿದ್ಯುತ್ ಕಂಬಗಳು ಮತ್ತು ಮರಗಳು ರಸ್ತೆ ಬದಿಯಲ್ಲಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಜತೆಗೆ ಕೆಲ ಪ್ರವಾಸಿಗರು ವಿವಿಧ ಭಂಗಿಯಲ್ಲಿ ಫೋಟೋ ತೆಗೆಯಲು ಹೋದಾಗ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಅಪಾಯದ ಸಂದರ್ಭದಲ್ಲಿ ತಕ್ಷಣದ ಸಹಾಯಕ್ಕಾಗಿ ಘಟನಾ ಸ್ಥಳಕ್ಕೆ ತೆರಳುವುದು ಸಹ ಕಷ್ಟಕರವಾಗಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳು ಯಾವುದೇ ಪ್ರಾಣಹಾನಿ ಮತ್ತು ಅಪಾಯ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಎತ್ತಿನಭುಜದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇದು ಚಾರಣಿಗರಿಗೆ ನಿರಾಸೆ ಮೂಡಿಸಿದೆ.
ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ: ಮತ್ತೊಂದೆಡೆ ಮುಂಗಾರು ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಜಲಪಾತಗಳು, ಸಫಾರಿ ಮತ್ತು ಟ್ರೆಕ್ಕಿಂಗ್ ಪ್ರವೇಶವನ್ನು ನಿರ್ಬಂಧಿಸಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಜುಲೈ ೩೦-೨೦೨೩) ಆದೇಶ ಹೊರಡಿಸಿದ್ದಾರೆ. ತಾಣಗಳು. ರಾಜ್ಯದ ಪ್ರಸಿದ್ಧ ಧಾರ್ಮಿಕ ಮತ್ತು ಚಾರಣ ತಾಣವಾದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧಿಸಲಾಗಿದೆ.
ಸ್ಥಳೀಯ ಜಲಪಾತಗಳಿಗೆ ಪ್ರವೇಶ ನಿಷೇಧ: ಮುಂಗಾರು ಮಳೆ ತೀವ್ರಗೊಂಡಿದ್ದು, ಜಲಪಾತಗಳನ್ನು ವೀಕ್ಷಿಸಲು ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಪ್ರವಾಸಿಗರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಚಾದ್ರಿ ಮತ್ತು ಇತರ ಸ್ಥಳಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕೊಡಚಾದ್ರಿ ಬೆಟ್ಟದ ಜೊತೆಗೆ ಸ್ಥಳೀಯ ಜಲಪಾತಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಕೊಡಚಾದ್ರಿಯಲ್ಲಿ ನಿಷೇಧಾಜ್ಞೆ ಹೇರಿರುವುದರಿಂದ ಸ್ಥಳೀಯ ವ್ಯಾಪಾರಿಗಳು ಹಾಗೂ ಜೀಪ್ ಚಾಲಕರು ತೀವ್ರ ತೊಂದರೆ ಅನುಭವಿಸಿದ್ದಾರೆ.
ಈ ಜಲಪಾತಗಳ ವೀಕ್ಷಣೆಗೆ ನಿರ್ಬಂಧ: ಈ ವಲಯದ ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತಗಳಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ನಿರ್ಬಂಧಿಸಲಾಗಿತ್ತು.
ಚಾರಣ ನಿಷೇಧಿತ ಪ್ರದೇಶಗಳೆಂದರೆ: ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ನರಸಿಂಹ ಗಡ್-ಗಡಾಯಿಕಲ್ಲು, ವಾಲಿಕುಂಜ, ನರಸಿಂಹ ಪರ್ವತ, ಗಂಗಡಿಕಲ್ಲು, ಟ್ರೆಕ್ಕಿಂಗ್ ಅನ್ನು ಸದ್ಯಕ್ಕೆ ನಿಷೇಧಿಸಲಾಗಿದೆ. ಕಟ್ಟಿನಹೊಳೆ ಮಾರ್ಗವಾಗಿ ಕೊಡಚಾದ್ರಿಗೆ ಹೋಗುವ ವಾಹನ ವ್ಯವಸ್ಥೆ, ಕುದುರೆಮುಖ-ಸಿಂಗ್ಸರ್ ಸಫಾರಿ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.