ಎತ್ತಿನಬಂಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದ ಶಿಕ್ಷಕರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 1 :- ಶಾಲಾ ಪ್ರಾರಂಭೋತ್ಸವವನ್ನು ಈ ಭಾರಿ ಶಾಲಾ ಶಿಕ್ಷಕರು ಶಾಲೆಯ ಆವರಣವನ್ನು ಹಸಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಎತ್ತಿನಬಂಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಕರೆತಂದು ಹೂಗುಚ್ಛ ನೀಡಿ ಸಿಹಿ ಹಂಚಿ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಿ ಸಂಭ್ರಮಿಸಿದ ವಾತಾವರಣ ತಾಲೂಕಿನ ಸೂಲದಹಳ್ಳಿ ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಬುಧವಾರ ಶಾಲಾಪ್ರಾರಂಭೋತ್ಸವ ದಿನ ಕಂಡುಬಂದಿತು.
ಶಾಲಾಪ್ರಾರಂಭೋತ್ಸವವು ಪ್ರತಿ ಮಕ್ಕಳ ಮನಸ್ಸಲ್ಲಿ ಸದಾ ಉಳಿಯುವಂತೆ ಶಾಲೆಗೆ ಮಕ್ಕಳನ್ನು ವಿಶೇಷ ರೀತಿಯಲ್ಲಿ ಆಹ್ವಾನಿಸಲು ಸರ್ಕಾರಿ ಶಾಲಾ ಮುಖ್ಯಗುರುಗಳಾದ ಡಿ ಬೋರಯ್ಯ ನೇತೃತ್ವದಲ್ಲಿ ಶಾಲೆಯ ಶಿಕ್ಷಕ ವರ್ಗ ಮತ್ತು ಎಸ್ ಡಿ ಎಂ ಸಿ ಪದಾಧಿಕಾರಿಗಳು  ಸೇರಿ ಶಾಲೆಯ ಆವರಣವನ್ನು ಹಬ್ಬದ ರೀತಿಯಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಎತ್ತಿನಬಂಡಿಯಲ್ಲಿ ಕೂಡ್ರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಹೂಗುಚ್ಛ ನೀಡಿ ಆಹ್ವಾನಿಸಿ  ಸಿಹಿಹಂಚಿ ಸಮವಸ್ತ್ರ ಮತ್ತು ಪಠ್ಯಪುಸ್ತಕ ನೀಡಿ ಎಲ್ಲಾ ಮಕ್ಕಳು ನಿಮ್ಮ ಉತ್ತಮವಾದ ಶೈಕ್ಷಣಿಕವಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಆಶಿಸಿದರು.
ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಿದ್ದಪ್ಪ ಮಕ್ಕಳಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಡಿ ಬೋರಯ್ಯ  ಎಸ್ ಡಿ ಎಂ ಸಿ ಅಧ್ಯಕ್ಷ ಸಣ್ಣ ದೊಡ್ಡಪ್ಪ, ಶಿಕ್ಷಕರಾದ ಮಧು, ಹರೀಶಗೌಡ, ರವಿ, ಸಂಗಮ, ಓಬಣ್ಣ, ಸಂತೋಷ, ವಿಜಯಲಕ್ಷ್ಮಿ, ವಿಜಯಶ್ರೀ ಹಾಗೂ ಹಾಸ್ಟೆಲ್ ಬಸವರಾಜ ಇತರರಿದ್ದರು.