ಸಿಂಧನೂರು.ಅ.೧೧- ತಾಲೂಕಿನ ಕಲ್ಮಂಗಿ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬೇರ್ಗಿ ವಿದ್ಯಾರ್ಥಿನಿ ಕು.ನಾಗರತ್ನ ತಂ ನಿಂಗಪ್ಪ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯಗುರುಗಳಾದ ಶಂಕ್ರಪ್ಪ ತಿಳಿಸಿದರು.
ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟಗಳು ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಅದರಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹಿರೇಬೇರ್ಗಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕು.ನಾಗರತ್ನ ತಂ ನಿಂಗಪ್ಪ ನಾಯ್ಕೊಡಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿದ್ದಾಳೆ.
ರಾಜ್ಯ ಮಟ್ಟಕ್ಕೆ ಆಯ್ಕೆ ವಿದ್ಯಾರ್ಥಿನಿಗೆ ಶಾಲಾ ಎಸ್.ಡಿ.ಎಂ.ಸಿ, ಪಾಲಕರು, ಶಾಲೆಯ ಮುಖ್ಯಗುರುಗಳು, ಊರಿನವರು ಸಂತೋಷ ವ್ಯಕ್ತಪಡಿಸುವದರೊಂದಿಗೆ ಸನ್ಮಾನಿಸಿದರು. ಜಿಲ್ಲಾ ಮಟ್ಟದಲ್ಲಿ ಗೆದ್ದು ಒಂದು ಹಳ್ಳಿಯ ಪ್ರತಿಭೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಿಜಕ್ಕೂ ಸಂತೋಷದ ವಿಷಯ ರಾಜ್ಯ ಮಟ್ಟದಲ್ಲಿ ಗೆದ್ದು ನಮ್ಮ ಶಾಲೆಯ, ಗ್ರಾಮದ, ತಂದೆ ತಾಯಿಗಳ ಹೆಸರು ಪಸರಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶಂಕ್ರಪ್ಪ, ಗ್ರಾಮಸ್ಥರಾದ ಅಡಿವೇಶ, ಮಲ್ಲನಗೌಡ, ನಿಂಗಪ್ಪ ನಾಯ್ಕೊಡಿ ಸೇರಿದಂತೆ ಗ್ರಾಮಸ್ಥರೆಲ್ಲಾ ಸೇರಿ ಗ್ರಾಮದಲ್ಲಿ ಸನ್ಮಾನಿಸಿ, ಪ್ರೋತ್ಸಾಹ ನೀಡಿ ರಾಜ್ಯಮಟ್ಟದಲ್ಲಿ ಗೆದ್ದು ಬರಲಿ ಎಂದು ಸ್ಪೂರ್ತಿ ತುಂಬಿದರು.