ಎತ್ತರಕ್ಕೆ ಬೆಳೆದರು ಹುಟ್ಟೂರು ಮರೆಯಲ್ಲ: ಐ.ಪಿ.ಎಸ್.ಅಧಿಕಾರಿ ಸಿಂಗೆ

ಅಫಜಲಪುರ: ನ.4: ತಾವು ಎತ್ತರಕ್ಕೆ ಬೆಳೆಯಬೇಕಾದರೆ ತಮ್ಮ ಹುಟ್ಟೂರಿನ ಜನತೆಯೆ ಸ್ಪೂರ್ತಿ ಹೀಗಾಗಿ ತಮ್ಮ ಹುಟ್ಟೂರು ಹಾಗೂ ಜನ್ಮ ಕೊಟ್ಟ ತಂದೆ ತಾಯಿ ವಿದ್ಯಾ ಕಲಿಸಿದ ಗುರುಗಳನ್ನು ಯಾವತ್ತು ಮರೆಯಬಾರದು ಅಲ್ಲದೆ ಈ ಭಾಗದಲ್ಲಿ ಪ್ರತಿಯೊಬ್ಬ ಯುವಕರು ಶಿಕ್ಷಣವಂತರಾಗಿ, ಉನ್ನತ ಅಧಿಕಾರಿಗಳಾಗಿ ಮುಂದೆ ಬರಬೇಕು ಎಂದು ಐ.ಪಿ.ಎಸ್ ಅಧಿಕಾರಿ ಮಂಜುನಾಥ ಸಿಂಗೆ ಅವರು ಯುವಕರಿಗೆ ಕಿವಿ ಮಾತು ಹೇಳಿದರು.

ಮಹಾರಾಷ್ಟ್ರÀ ಕಿ ಶಾನ್ ಪ್ರಶಸ್ತಿಗೆ ಭಾಜನಾರಾದ ಮೇಲೆ ಪ್ರಥಮ ಭಾರಿಗೆ ಹುಟ್ಟೂರಾದ ಅಫಜಲಪುರ ತಾಲೂಕಿನ ಗೌರ(ಬಿ) ಗ್ರಾಮಕ್ಕೆ ಸೋಮವಾರದಂದು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜೀವನದಲ್ಲಿ ನಿರಂತರ ಪ್ರಯತ್ನ ಹಾಗೂ ಸ್ಪಷ್ಟ ಗುರಿ, ಗುರುಗಳ ಮಾರ್ಗದರ್ಶನ ಇದ್ದಾಗ ಗುರಿ ತಲಪಲು ಸಾಧ್ಯವಿದೆ ಎಂದ ಅವರು ಈ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ತಾವು ಎಲ್ಲಾ ರೀತಿಯಿಂದ ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದರು.

ಯುವ ಬರಹಗಾರ ಬಸವರಾಜ ನಿಂಬರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉನ್ನತ ಅಧಿಕಾರಿಯಾಗಿ ಇಂದು ಮಹಾರಾಷ್ಟದ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಸಿಂಗೆ ಅವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ, ಅಷ್ಟೇ ಅಲ್ಲದೇ ಜೀವನದ ಏಳು ಬೀಳುಗಳೊಂದಿಗೆ ಜೀವನದ ಗುರಿ ತಲುಪಿ ಗ್ರಾಮದ ಕೀರ್ತಿ ಹಾಗೂ ತಾಲೂಕಿನ ಮತ್ತು ಜಿಲ್ಲೆಯ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ತಂದಿದ್ದು, ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು. ಡಾ.ಸಂಗಣ್ಣ ಸಿಂಗೆ ಮಾತನಾಡಿದರು. ಐ.ಪಿ.ಎಸ್. ಅಧಿಕಾರಿ ಮಂಜುನಾಥ ಸಿಂಗೆ ಅವರ ಧರ್ಮ ಪತ್ನಿ ಮೇಘಶ್ರೀ ಅವರು ಇತ್ತೀಚಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ ಅಲ್ಲದೇ ಗೌರ(ಬಿ) ಗ್ರಾಮದ ಪ್ರವೀಣ ಘಂಟೆ ಅವರು ಇತ್ತೀಚಿಗೆ ಪರೀಕ್ಷೆ ಬರೆದು ಪಿ.ಎಸ್.ಐ ಹುದ್ದೆಗೆ ನೇಮಕವಾದ ಪ್ರಯುಕ್ತ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎಂ.ಕೊರಬು, ಪಪ್ಪು ಪಟೇಲ, ದಯಾನಂದ ದೊಡ್ಮನಿ, ಮಲ್ಲಿಕಾರ್ಜುನ ಸಿಂಗೆ, ಶ್ರೀಶೈಲ ಪಾಟೀಲ, ಗೌತಮ ಸಕ್ಕರಗಿ, ಭಾಗಪ್ಪ ಕೊಳ್ಳಿ, ಶ್ರೀಶೈಲ ಸಿಂಗೆ, ಅಫಜಲಪುರ ಸಿಪಿಐ ಮಹಾದೇವ ಪಂಚಮುಖಿ ಸೇರಿದಂತೆ ಗ್ರಾಮಸ್ಥರು ಸನ್ಮಾನಿಸಿ ಶುಭ ಹಾರೈಸಿದರು.