ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಸಾಂಕೇತಿಕ ರಥೋತ್ಸವ

ಕುಣಿಗಲ್, ಏ. ೧೯- ಕೊರೊನಾ ೨ನೇ ಅಲೆ ಆರ್ಭಟವನ್ನು ನಿಯಂತ್ರಿಸುವ ಸಲುವಾಗಿ ಇತಿಹಾಸ ಪ್ರಸಿದ್ದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯಲ್ಲಿ ಜಿಲ್ಲಾಡಳಿತ ರದ್ದುಪಡಿಸಿರುವುದರಿಂದ ಶ್ರೀಸ್ವಾಮಿಯ ರಥೋತ್ಸವವನ್ನು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕ ಮತ್ತು ಸಾಂಕೇತಿಕವಾಗಿ ನಡೆಸಲಾಯಿತು.
ಜಿಲ್ಲೆಯಲ್ಲಿ ಕೊರೊನಾ ೨ನೇ ಅಲೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಸೋಂಕು ೪ ಮತ್ತು ೫ ಶತಕಗಳನ್ನು ಭಾರಿಸುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಎಲ್ಲ ಜಾತ್ರೆ, ಸಭೆ, ಸಮಾರಂಭಗಳನ್ನು ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಅದ್ದೂರಿಯಾಗಿ ನಡೆಯಬೇಕಿದ್ದ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ದೇವಾಲಯ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಧಾರ್ಮಿಕ ವಿಧಿವತ್ತಾಗಿ ಸಾಂಕೇತಿಕವಾಗಿ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷ ದೇವಾಲಯದ ಹೊರ ಭಾಗದಲ್ಲಿರುವ ದೊಡ್ಡ ರಥವನ್ನು ಎಳೆಯದೆ ದೇವಾಲಯದ ಒಳಭಾಗದಲ್ಲಿ ಚಿನ್ನದ ರಥದಲ್ಲಿ ಶ್ರೀಸ್ವಾಮಿಯನ್ನು ಕೂರಿಸಿ ರಥವನ್ನು ಎಳೆಯಲಾಯಿತು.
ರಥೋತ್ಸವ ಅದ್ದೂರಿ ಆಚರಣೆಗೆ ಅವಕಾಶ ನೀಡಿದರೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರುವುದನ್ನು ಅರಿತ ಜಿಲ್ಲಾಡಳಿತ ಜನರ ಗುಂಪು ಸೇರದಂತೆ ಕಡಿವಾಣ ಹಾಕುವ ಉದ್ದೇಶದಿಂದ ಜಾತ್ರೆ ರದ್ದು ಮಾಡಿ ಶ್ರೀಸ್ವಾಮಿಯ ಸಾಂಪ್ರದಾಯಿಕ ರಥೋತ್ಸವಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಹೀಗಾಗಿ ಇಂದು ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಭಕ್ತ ಸಮೂಹ ಇಲ್ಲದೆ ದೇವಾಲಯ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನೆರವೇರಿತು.
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು.