ಎಡನೀರು ಮಠದ ಉತ್ತರಾಧಿಕಾರಿ ಶ್ರೀ ಸಚ್ಚಿದಾನಂದ ಭಾರತಿಗೆ ಸನ್ಯಾಸ ಧೀಕ್ಷೆ

ಕಾಸರಗೋಡು, ಅ.೨೭- ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂ ಗಳವರ ಉತ್ತರಾಧಿಕಾರಿಯಾಗಿ ಪೀಠಾ ರೋಹಣಗೈಯಲಿರುವ ಶ್ರೀ ಜಯರಾಮ ಮಂಜತ್ತಾಯರು (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು) ಅ.೨೬ ರಂದು ಸೋಮವಾರ ವಿಜಯ ದಶಮಿಯ ಶುಭ ಮುಹೂರ್ತದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ತಮಿಳುನಾಡಿನ ಕಾಂಚಿ ಕಾಮಕೋಟಿ ಸನ್ನಿಧಿಯಲ್ಲಿ ಸೋಮವಾರ ಮುಂಜಾನೆ ಕಾಂಚಿ ಕಾಮಕೋಟಿಯ ಪೀಠಾಧಿಪತಿಗಳಾದ ಶ್ರೀವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಜಯರಾಮ ಮಂಜತ್ತಾಯರಿಗೆ ಸನ್ಯಾಸ ದೀಕ್ಷೆ ನೀಡಿದರು. ಜೊತೆಗೆ ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ನೂತನ ಯತಿವರ್ಯರಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪ್ರಣವಮಂತ್ರವನ್ನು ಬೋಧಿಸಿದರು.
ಭಾನುವಾರ ದಿಂದಲೇ ಸನ್ಯಾಸ ದೀಕ್ಷೆಯ ಪೂರ್ವಭಾವಿ ಕಾರ್ಯಕ್ರಮಗಳು ಕಾಂಚಿ ಕಾಮಕೋಟಿ ಪೀಠದಲ್ಲಿ ಆರಂಭವಾಗಿದ್ದವು. ಸನ್ಯಾಸ ದೀಕ್ಷೆಯ ಪೂರ್ವಕರ್ಮಗಳನ್ನು ಪೂರೈಸಿದ ಜಯರಾಮ ಮಂಜತ್ತಾಯರು ಬಳಿಕ ರಾತ್ರಿ ವಿರಜಾ ಹೋಮಕ್ಕೆ ಅಗ್ನಿ ಪ್ರತಿಷ್ಠಾಪನೆಗೈದರು. ನಿಯಮಾನುಸಾರ ರಾತ್ರಿಪೂರ್ತಿ ಜಾಗರಣೆ ಕುಳಿತು ಪ್ರಾತಃ ಕಾಲದಲ್ಲಿ ವಿರಜಾ ಹೋಮವನ್ನು ಅವರು ಶ್ರದಾಟಛಿಭಕ್ತಿಯಿಂದ ಪೂರೈಸಿದರು.
ಬಳಿಕ ವಿಜಯ ದಶಮಿಯ ಸುಮುಹೂರ್ತದಲ್ಲಿ ಸನ್ಯಾಸ ದೀಕ್ಷೆಯ ಪ್ರಮುಖ ಘಟ್ಟದ ಕಾರ್ಯಕ್ರಮಗಳು ನಡೆದವು. ಜಲಾಶಯದಲ್ಲಿ ಪುಣ್ಯಸ್ನಾನಗೈದು, ತಮ್ಮ ಜನಿವಾರ, ಉಡುದಾರ, ತಲೆ ಕೂದಲು ಹಾಗೂ ವಸ್ತ್ರಗಳನ್ನೆಲ್ಲಾ ಬಿಸುಟಿ ಬಂದ ಶಿಷ್ಯನಿಗೆ ಕಾಂಚಿ ಕಾಮಕೋಟಿಯ ಪೀಠಾಧಿಪತಿಗಳಾದ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಕಾಷಾಯ ವಸ್ತ್ರ, ದಂಡ ನೀಡಿದರು. ನಂತರ ಶಿಷ್ಯನನ್ನು ಕಾಂಚಿ ದೇವಾಲಯಕ್ಕೆ ಕರೆದೊಯ್ದರು. ಶಾರ್ವರಿನಾಮ ಸಂವತ್ಸರದ ದಕ್ಷಿಣಾಯಣ ಶರತ್ ಋತು ನಿಜ ಆಶ್ವಯುಜಯುಕ್ತ , ತುಲಾಮಾಸ, ಶುಕ್ಲಪಕ್ಷ ದಶಮಿಯಂದು ಪೂರ್ವಾಹ್ನ ೧೦.೩೦ ರ ಧನುರ್ಲಗ್ನದಲ್ಲಿ ಶ್ರೀ ಕಾಮಾಕ್ಷಿ ದೇವಿಯ ಸನ್ನಿಧಿಯಲ್ಲಿ ಗುರುಗಳಿಂದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಕಿವಿಯಲ್ಲಿ ಪ್ರಣವ ಮಂತ್ರದ ಉಪದೇಶ ಪಡೆದುಕೊಂಡರು. ಶ್ರೀ ಮಠದ ನೂರಾರು ಮಂದಿ ಭಕ್ತರು ಈ ಶುಭ ಸಂದರ್ಭದಲ್ಲಿ ಭಾಗಿಗಳಾಗಿದ್ದರು.
ಇನ್ನು ಇಂದು ಬೆಳಿಗ್ಗೆ ೧೧ ರಿಂದ ೧೨ರ ಮಧ್ಯೆ ಸಚ್ಚಿದಾನಂದ ಶ್ರೀಗಳು ಎಡನೀರು ಪುರಪ್ರವೇಶಗೈಯ್ಯಲಿದ್ದು ಬುಧವಾರ ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವರು.